ಎರಡು ತಿಂಗಳಿಗೊಮ್ಮೆ ಪಾಲಿಕೆ ಜನಸ್ಪಂದನ; ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಮಾಹಿತಿ

mng-nov28-mayor
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಜನರ ಅಗತ್ಯಗಳಿಗೆ ಪರಿಣಾಮಕಾರಿ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗುವಂತೆ ಮುಂದಿನ ತಿಂಗಳಿಂದ ಮಹಾನಗರ ಪಾಲಿಕೆ ವತಿಯಿಂದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಶುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅವರು ಮಂಗಳವಾರ ನಿರ್ವಹಿಸಿದ ‘ ಮೇಯರ್ ಫೋನ್ ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರೋರ್ವರ ಜತೆ ಮಾತನಾಡುವ ಸಂದರ್ಭದಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡರು.
ಡಿಸೆಂಬರ್ ಮೊದಲ ವಾರ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮೊದಲ ಜನಸ್ಪಂದನ ನಡೆಯಲಿದ್ದು, ನಂತರದ ದಿನಗಳಲ್ಲಿ ಪಾಲಿಕೆ ವ್ಯಾಪ್ತಿ ವಲಯ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮಗಳು ನಡೆಯಲಿವೆ. ಮೇಯರ್, ಆಯುಕ್ತರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಜನಸ್ಪಂದನ ದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆ, ಅಗತ್ಯಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.
ಫೋನ್ ಇನ್‌ನಲ್ಲಿ ಮಂಗಳವಾರ ದೂರವಾಣಿ ಕರೆ ಮೂಲಕ ಮಾತನಾಡಿದ ಪಾಂಡೇಶ್ವರದ ಜಾರ್ಜ್ ಡಿಸೋಜಾ ಅವರು , ಫೋನ್-ಇನ್ ಕಾರ್ಯಕ್ರಮದ ಒಂದು ಗಂಟೆ ಅವಧಿಯಲ್ಲ ಎಲ್ಲ 60 ವಾರ್ಡುಗಳ ಜನರು ಮಾತನಾಡಲು ಪ್ರಯತ್ನಿಸುತ್ತಿರುವ ಕಾರಣ ಹೆಚ್ಚಿನವರು ಸಮಸ್ಯೆ ಹೇಳಿಕೊಳ್ಳಲು ಅವಕಾಶ ದೊರೆಯುತ್ತಿಲ್ಲ. ಪ್ರತೀ 4- 5 ವಾರ್ಡುಗಳ ಕಾರ್ಯಕ್ರಮ ಮಾಡುವುದು ಸೂಕ್ತ ಎಂದು ನೀಡಿದ ಸಲಹೆಗೆ ಮೇಯರ್ ಜನಸ್ಪಂದನಕ್ಕೆ ಪಾಲಿಕೆ ರೂಪಿಸಿದ ಯೋಜನೆ ಕುರಿತು ವಿವರಿಸಿದರು.
ಉಪ ಮೇಯರ್ ಸುನಿತಾ, ಉಪ ಆಯುಕ್ತರಾದ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net