

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ, ವೆಟ್‌ವೆಲ್‌ವೆಗಳ ಅಸರ್ಮಪಕ ನಿರ್ವಹಣೆಗೆ ಸಂಬಂಧಿಸಿ ಬುಧವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶ, ಚರ್ಚೆಗೆ ಕಾರಣವಾಯಿತು. ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಲು ನಿರ್ಧರಿಸಲಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯ ಅಬ್ದುಲ್ ರವೂಫ್ ವಿಷಯ ಪ್ರಸ್ತಾಪಿಸಿದರು. ನಗರದಾದ್ಯಂತ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ದುರ್ವಾಸನೆಯಿಂದ ಸಾರ್ವಜನಿಕರು ನಡೆದಾಡುವಂತಾಗಿದೆ ಎಂದರು. ಇತರ ವಾರ್ಡ್‌ಗಳಲ್ಲೂ ಈ ಸಮಸ್ಯೆಯ ಬಗ್ಗೆ ಅಲ್ಲಿನ ಸದಸ್ಯರು ಸಮಸ್ಯೆಗಳನ್ನು ವಿವರಿಸಿದರು.
ವೆಟ್‌ವೆಲ್‌ಗಳ ನಿರ್ವಹಣೆಗೆ ಕೋಟಿಗಟ್ಟಲೆ ಹಣ ಗುತ್ತಿಗೆದಾರರಿಗೆ ನೀಡಲಾಗುತ್ತಿದ್ದರೂ ನಿರ್ವಹಣೆ ಆಗುತ್ತಿಲ್ಲ ಎಂದು ಸದಸ್ಯ ವಿನಯ್ ರಾಜ್ ಆರೋಪಿಸಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಪಾಲಿಕೆ ನೂತನ ಆಯುಕ್ತ ಆನಂದ್ ಅವರು ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸುವುದಾಗಿ ಹೇಳಿದರು.
ಪುಟ್ಭಾಲ್ ಮೈದಾನ ಜಂಗಿ ಕುಸ್ತಿ: ಪುಟ್ಭಾಲ್ ಮೈದಾನವನ್ನು ಕಬಡ್ಡಿ ಹಾಗೂ ಕುಸ್ತಿಗೆ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳುವುದಕ್ಕೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುಟ್ಭಾಲ್ ಅಸೋಸಿಯೇಶನ್‌ನವರು ಇದುವರೆಗೆ ಮೈದಾನವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಅದರಂತೆ ಅಸೋಸಿಯೇಶನ್‌ನವರನ್ನು ಕರೆಯಲಾಗಿತ್ತು. ಸೂಚಿಸಿದ ದಿನದಂದು ಅವರು ಬಂದಿಲ್ಲ. ಹಾಗಾಗಿ ಅಜೆಂಡಾದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಮೇಯರ್ ಹೇಳಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ವಾರದೊಳಗೆ ಅಸೋಸಿಯೇಶನ್‌ನವರನ್ನು ಕರೆಸಿ ಮುಂದಿನ ಮಂಗಳವಾರ ಸಭೆ ನಡೆಸಿ, ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಪಾರ್ಕಿಂಗ್ ಸಮಸ್ಯೆ: ಸದಸ್ಯ ಶಶಿಧರ ಶೆಟ್ಟಿಯವರು ನಗರದ ಪಾರ್ಕಿಂಗ್ ವ್ಯವಸ್ಥೆ ಬಿಗಾಡಾಯಿಸಿದ್ದು, ನಗರದ ರಸ್ತೆಗಳು ಅಗಲೀಕರಣಗೊಂಡು ಕಾಂಕ್ರೀಟಿಕೀರಣಗೊಂಡಿದ್ದರೂ ಪೂರಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ದೂರಿದರು.
ಸುಧೀರ್ ಶೆಟ್ಟಿಯವರು ಮಾತನಾಡಿ, ಕದ್ರಿ ಪಾರ್ಕ್ ಬಳಿ ಬೆಳಗ್ಗೆ 5 ಗಂಟೆಯ ವೇಳೆಗೆ ಟ್ರಾಫಿಕ್ ಪೊಲೀಸರು ದಂಡ ಹಾಕುವ ಕೆಲಸ ಮಾಡುತ್ತಾರೆ ಎಂದು ಆಕ್ಷೇಪಿಸಿದರೆ, ನಗರದಲ್ಲಿ ಸೂಕ್ತ ಬಸ್ ಶೆಲ್ಟರ್‌ಗಳೇ ಇಲ್ಲ ಎಂದು ಅಬ್ದುಲ್ ಲತೀಫ್ ಸಭೆಯ ಗಮನ ಸೆಳೆದರು. ಆರ್‌ಟಿಒ, ಪಾಲಿಕೆ ಹಾಗೂ ಸಂಚಾರ ಪೊಲೀಸರ ಪ್ರತ್ಯೇಕ ಸಭೆ ಕರೆದು ಚರ್ಚೆ ನಡೆಸಲು ನಿರ್ಧರಿಸಲಾಯಿತು.
ಖಾಲಿ ಜಾಗಕ್ಕೆ ತೆರಿಗೆ ಸರ್ಕಾರಕ್ಕೆ ಪತ್ರ: ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜನರಿಗೆ ಹೊರೆ ಆಗದಂತೆ 2021-22ನೆ ಸಾಲಿನಲ್ಲಿ ಏರಿಕೆ ಮಾಡಲಾಗಿತ್ತು. ಈ ಸಮಯ ಸರ್ಕಾರದಿಂದ ಶೋಕಾಸು ನೋಟೀಸು ಜಾರಿಯಾದ ಹಿನ್ನೆಲೆಯಲ್ಲಿ ಎರಡೆರಡು ಬಾರಿ ತಿದ್ದುಪಡಿ ಮಾಡಿ ತೆರಿಗೆ ಏರಿಕೆ ಮಾಡಲಾಗಿದೆ. ಆದರೆ ಈ ಸಂದರ್ಭ ಖಾಲಿ ಜಾಗಕ್ಕೆ ಭಾರೀ ಪ್ರಮಾಣದಲ್ಲಿ ತೆರಿಗೆ ಏರಿಕೆಯಾಗಿದೆ. ಸಾರ್ವಜನಿಕರೊಬ್ಬರು 60 ಸೆಂಟ್ಸ್ ಖಾಲಿ ಜಾಗಕ್ಕೆ ಹಿಂದೆ 5000 ರೂ. ತೆರಿಗೆ ಕಟ್ಟುತ್ತಿದ್ದರೆ ಏರಿಕೆಯಾದ ದರದ ಪ್ರಕಾರ 60,000 ರೂ. ಕಟ್ಟಬೇಕಾಗಿದೆ. ಇದು ಜನರಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ತಿದ್ದುಪಡಿಗೆ ಸರ್ಕಾರಕ್ಕೆ ಕಳುಹಿಸಬೇಕು ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮನವಿ ಮಾಡಿದರು.
ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವಾ, ಹೇಮಲತಾ ರಘು ಸಾಲ್ಯಾನ್, ನಯನ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.