ಪೌರ ಕಾರ್ಮಿಕರ ನೇರ ನೇಮಕಾತಿ ಅವ್ಯವಹಾರ ಶಂಕೆ ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ನವೀನ್ ಡಿಸೋಜ ಆರೋಪ

mcc
Published on

ಮಂಗಳೂರು: ಪೌರ ಕಾರ್ಮಿಕರ ನೇರ ನೇಮಕಾತಿ ಸಂದರ್ಭ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಇದರಲ್ಲಿ ಅರ್ಹರಿಗೆ ಅನ್ಯಾಯವಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಅವ್ಯವಹಾರ ಆಗಿರುವ ಶಂಕೆ ಇದೆ ಎಂದು ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ ಆರೋಪಿಸಿದ್ದಾರೆ.


ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಶುಕ್ರವಾರ ಮೇಯರ್ ಜಯಾನಂದ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ನವೀನ್ ಡಿಸೋಜ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಶಶಿಧರ ಹೆಗ್ಡೆ, ಸ್ಥಳೀಯವಾಗಿ 25 ವರ್ಷದಿಂದ ಕೆಲಸ ಮಾಡಿದವರಿಗೆ ನೇಮಕಾತಿ ಆಗಿಲ್ಲ. 2-3 ವರ್ಷದ ಅನುಭವ ಹೊಂದಿದವರನ್ನು ನೇಮಕಾತಿ ಮಾಡಲಾಗಿದೆ ಎಂದರು.


ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪೌರ ಕಾರ್ಮಿಕರ ನೇರ ನೇಮಕಾತಿ ಗಂಭೀರ ವಿಚಾರ. ಸ್ಥಳೀಯರಿಗೆ ಅವಕಾಶ ಸಿಗಬೇಕು. ಆದರೆ ಇದರಲ್ಲಿ ಅವ್ಯವಹಾರ ಆಗಿದೆ ಎಂದು ಪದೇ ಪದೇ ಹೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಈಗಾಗಲೇ 101 ಪೌರ ಕಾರ್ಮಿಕರ ನೇರ ನೇಮಕಾತಿಯಾಗಿದೆ. ಈ ವಿಚಾರವನ್ನು ಅಂತಿಮ ಘಟ್ಟಕ್ಕೆ ಕೊಂಡೊಯ್ಯಬೇಕು ಎಂದರು.


ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯವರು ಮಾಡಿದ್ದಾರೆ. ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಎಲ್ಲಾ ದಾಖಲೆಗಳು ಇವೆ. ಸದಸ್ಯರು ಅದನ್ನು ಪರಿಶೀಲಿಸಬಹುದು ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net