ತ್ಯಾಜ್ಯ ಸಂಗ್ರಹಣೆಗೆ 27.15 ಕೋಟಿ ರೂ. ವಾಹನ ಖರೀದಿ

mcc gadi
Published on

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಮನೆಗಳ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಟಕ್ಕಾಗಿ ಸ್ವಚ್ಛ ಭಾರತ್ ಮಿಷನ್‌ನಡಿ 27.15 ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ಖರೀದಿ ಮಾಡಲಾಗಿದೆ.


ಹೈಡ್ರಾಲಿಕ್ ಜೀಪ್ ಟಿಪ್ಪರ್ 107, ಟಿಪ್ಪರ್ ಟ್ರಕ್ 30, ಕಾಂಪಾಕ್ಟರ್ 16, ಬ್ಯಾಟರಿ ಆಪರೇಟೆಡ್ ಟ್ರೈ ಸೈಕಲ್ 24 ವಾಹನಗಳನ್ನು ಖರೀದಿಸಲಾಗುತ್ತಿದೆ.
ಬಳ್ಳಾರಿಯ ಮೆ. ಕ್ಯಾಮಿಯಾನ್ ಅಟೋಮೊಬೈಲ್ ಸಂಸ್ಥೆಯಿಂದ 4.81 ಕೋಟಿ ರೂ. ಮೊತ್ತದ 45 ಹೆಡ್ರಾಲಿಕ್ ಜೀಪ್ ಟಿಪ್ಪರ್ ವಾಹನ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ತಲುಪಿದ್ದು, ಮಂಗಳವಾರ ಅವುಗಳನ್ನು ಹಸ್ತಾಂತರ ಮಾಡಲಾಯಿತು.


ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ವಲಯಗಳಿಗೆ ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ಮನೆ ಕಸ ಸಂಗ್ರಹ ಮತ್ತು ಸಾಗಾಟಕ್ಕೆ ವಾಹನಗಳ ಖರೀದಿ, ಮಾನವ ಸಂಪನ್ಮೂಲ, ನಿರ್ವಹಣೆಯೊಂದಿಗೆ ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆಯ ಮೂಲಕ ಹಸಿ ಹಾಗೂ ಒಣ ತ್ಯಾಜ್ಯ ಸಂಗ್ರಹ ನಡೆಯಲಿದೆ. ಗುತ್ತಿಗೆದಾರರ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪಾಲಿಕೆ ಆಯುಕ್ತ ಆನಂದ್ ತಿಳಿಸಿದ್ದಾರೆ.


ಜೆಟ್ ಸಕ್ಕಿಂಗ್ ಯಂತ್ರಪಾಲಿಕೆ ವ್ಯಾಪಿಯ ವಲಯ 2ರ ವಾರ್ಡ್ ಸಂಖ್ಯೆ 21ರಿಂದ 40ರ ಒಳಚರಂಡಿ ನಿರ್ವಹಣೆಗಾಗಿ ಜೆಟ್ ಸಕ್ಕಿಂಗ್ ಯಂತ್ರ ಖರೀದಿಸಲಾಗಿದೆ. ಈ ಯಂತ್ರವು 6000 ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, 39.11 ಲಕ್ಷ ರೂ.ಗಳಿಗೆ ಈ ವಾಹನವನ್ನು ಮೆ. ಕ್ವಾಲಿಟಿ ಎನ್ವಿರೋ ಇಂಜಿನಿಯರಿಂಗ್ ಪ್ರೈ. ಲಿ. ಸಂಸ್ಥೆಯಿಂದ ವಾಹನ ಖರೀದಿಸಲಾಗಿದೆ.


ವಾಹನಗಳ ಹಸ್ತಾಂತರ ಸಂದರ್ಭ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವ, ಕಿಶೋರ್ ಕೊಟ್ಟಾರಿ, ಹೇಮಲತಾ ರಘು ಸಾಲ್ಯಾನ್, ನಯನ ಆರ್. ಕೋಟ್ಯಾನ್, ಹಿರಿಯ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ದಿವಾಕರ ಪಾಂಡೇಶ್ವರ, ಎ.ಸಿ.ವಿನಯರಾಜ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net