

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧ ಟೈಗರ್ ಕಾರ್ಯಾಚರಣೆ ಮೂರನೇ ದಿನವೂ ಮುಂದುವರಿದಿದೆ.
ಬುಧವಾರ ಕೂಳೂರು, ಕಾವೂರು ನಡುವೆ ರಸ್ತೆ ಬದಿಯಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗಿದೆ. ಜನರ ಆರೋಗ್ಯದ ಜತೆಗೆ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ. ಗೂಡಂಗಡಿ, ಪಾನ್ ಅಂಗಡಿಗಳನ್ನು ತೆರವು ಮಾಡಲಾಗಿದೆ. ಈ ಸಂದರ್ಭ ವಲಯ ಆಯುಕ್ತೆ ರೇಖಾ ಶೆಟ್ಟಿ, ಮನಪಾ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ಮೊದಲಾದವರಿದ್ದರು.
ಜಿಲ್ಲಾಡಳಿತ ಮಧ್ಯ ಪ್ರವೇಶಿಸಲಿ: ಬೀದಿಬದಿ ವ್ಯಾಪಾರಿಗಳ ತೀವ್ರ ಹೋರಾಟದ ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೋರಾಟಗಾರರ ಸಂಧಾನ ಸಭೆಯ ಬಳಿಕ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸುತ್ತೇವೆ ಎಂದು ಸಾರ್ವನಿಕವಾಗಿ ಹೇಳಿಕೆ ನೀಡಿ ದಿನ ಬೆಳಗಾಗುವಷ್ಟರಲ್ಲಿ ಮತ್ತೆ ಟೈಗರ್ ಕಾರ್ಯಾಚರಣೆ ನಡೆಸಿರುವುದು ಬಿಜೆಪಿ ಆಡಳಿತದ ದುರಹಂಕಾರ ಸಾಕ್ಷಿ. ಬಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ನಗರಪಾಲಿಕೆಗೆ ಶ್ರೀಮಂತರ ಅಕ್ರಮ ಕಟ್ಟಡಗಳನ್ನು ಮುಟ್ಟುವ ಧೈರ್ಯ ಇದೆಯಾ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶ ಮಾಡಿ ಟೈಗರ್ ಕಾರ್ಯಾಚರಣೆ ನಿಲ್ಲಿಸಲು ಕ್ರಮ ವಹಿಸಬೇಕು ಬಡವರ ಮೇಲೆ ದಾಳಿ ಮುಂದುವರಿಸಿದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಇಮ್ತಿಯಾಜ್ ಎಚ್ಚರಿಸಿದ್ದಾರೆ.