

ಮಂಗಳೂರು: ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ನಿರಂತರವಾಗಿ ಅವರಿಗೆ ಅಗೌರವ ಉಂಟು ಮಾಡಿದೆ. ಈಗ ಆ ರೀತಿ ಮಾಡಲು ಸಾಧ್ಯವೂ ಇಲ್ಲ, ನಾವು ಬಿಡುವುದೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಸಿಟಿಝನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಸಂವಿಧಾನ ಸನ್ಮಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆಹರೂ ನೀತಿಯಿಂದ ಬೇಸತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಮರಣಾನಂತರ ದೆಹಲಿಯಲ್ಲಿ ಅಂತ್ಯಸಂಸ್ಕಾರ ಮಾಡಲೂ ಬಿಡಲಿಲ್ಲ. ಅದಾಗಿ ಆರೇ ತಿಂಗಳಲ್ಲಿ ಅವರ ಪತ್ನಿ ಉಳಿದುಕೊಂಡಿದ್ದ ನಿವಾಸವನ್ನು ತೆರವು ಮಾಡಲಾಗಿತ್ತು. ಸ್ಮಾರಕವನ್ನೂ ನಿರ್ಮಿಸಿಲ್ಲ. ಆದರೆ ಅಂಬೇಡ್ಕರ್ ಅವರಿಗೆ ಗೌರವ ನೀಡಿದ್ದು ಬಿಜೆಪಿ. ಅಂಬೇಡ್ಕರ್ ಅವರ ನೆನಪಿನ ಸ್ಥಳಗಳನ್ನು ಪಂಚ ತೀರ್ಥಗಳನ್ನಾಗಿ ಮಾಡಿ ಗೌರವ ಸಲ್ಲಿಸಲಾಗಿದೆ ಎಂದು ಬಿ.ಎಲ್. ಸಂತೋಷ್ ಹೇಳಿದರು.
ಕಾಂಗ್ರೆಸ್‌ನವರು ಈಗ ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರ ಹೆಸರು ಹೇಳಿ ಲಾಭ ಪಡೆಯುವ ಸಮಯದಿಂದ ವಂಚಿತರಾಗಿದ್ದಾರೆ. ಜನರನ್ನು ಸುಳ್ಳು ಹೇಳಿ ಮೋಸ ಮಾಡಲು ಆಗಲ್ಲ. ಅವರಿಗೆ ಸಂವಿಧಾನದ ಮೇಲೆ ಯಾವ ಗೌರವವೂ ಇಲ್ಲ ಎಂದರು.
ನರೇಂದ್ರ ಮೋದಿ ಸಂವಿಧಾನ ಬದಲಿಸ್ತಾರೆ ಎಂಬ ಆರೋಪ ಮಾಡುತ್ತಾರೆ. ಸಂವಿಧಾನಕ್ಕೆ ಇದುವರೆಗೆ 106 ಬಾರಿ ತಿದ್ದುಪಡಿ ಆಗಿದೆ. ಈ ಪೈಕಿ 75 ಬಾರಿ ತಿದ್ದುಪಡಿ ಮಾಡಿ ಅದರ ಸ್ವರೂಪ ಬದಲಿಸಿದ್ದು ಕಾಂಗ್ರೆಸ್ ಸರ್ಕಾರ. ನರೇಂದ್ರ ಮೋದಿ ಅವಧಿಯಲ್ಲಿ ಸಂವಿಧಾನ ತಿದ್ದುಪಡಿ ಆಗಿದ್ದು ಕೇವಲ 8 ಬಾರಿ. ಅದರಲ್ಲಿ ಒಂದೇ ಒಂದು ತಿದ್ದುಪಡಿಯನ್ನು ದುರುಪಯೋಗ ಮಾಡಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದ ಕಾಂಗ್ರೆಸ್ ಸರ್ಕಾರ ಅದರಿಂದಲೇ 90 ರಾಜ್ಯ ಸರ್ಕಾರಗಳನ್ನು ಉರುಳಿಸಿತ್ತು. 11 ಸರ್ಕಾರಗಳನ್ನು ಒಂದೇ ದಿನ ಬರ್ಕಾಸ್ತು ಮಾಡಿದ್ದಾರೆ. ಇಂದಿರಾ ಗಾಂಧಿ ಡಿಕ್ಟೇಟರ್ ಇನ್ ಚೀಫ್ ಆಗಿದ್ದರು ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿ, ನೆಹರೂ ಒಳಪ್ರಯತ್ನದಿಂದ ಆರ್ಟಿಕಲ್ 370 ಸಂವಿಧಾನದೊಳಗೆ ಸೇರಿತ್ತು. ಇದರಿಂದಾಗಿ 30-35 ಸಾವಿರದಷ್ಟಿರುವ ಕೇಂದ್ರ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಆರ್ಟಿಕಲ್ 370 ತೆಗೆದು ಅಂಬೇಡ್ಕರ್ ಆಶಯ ಈಡೇರಿಸಿದ್ದು ನರೇಂದ್ರ ಮೋದಿ ಎಂದರು.
ಸಂವಿಧಾನದ ಆರ್ಟಿಕಲ್ 368ನ್ನು ದುರ್ಬಳಕೆ ಮಾಡಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಲಾಯಿತು. 38ನೇ ತಿದ್ದುಪಡಿ ಮಾಡಿ ತುರ್ತು ಪರಿಸ್ಥಿತಿ ತೀರ್ಮಾನವನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸದಂತೆ ಮಾಡಲಾಯಿತು. ಈ ತಿದ್ದುಪಡಿಗಳನ್ನು ಮತ್ತೆ ಸರಿಪಡಿಸಿ ಮೂಲ ಸಂವಿಧಾನವನ್ನು ಮತ್ತೆ ಜಾರಿಗೆ ತಂದದ್ದು ತುರ್ತು ಪರಿಸ್ಥಿತಿ ನಂತರ ಬಂದ ಸಮ್ಮಿಶ್ರ ಸರ್ಕಾರ ಎಂದು ಹೇಳಿದರು.
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಭಾಗ ಮುಖ್ಯಸ್ಥ ಡಾ.ಹೃಷಿಕೇಷ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಪುಸ್ತಕದ ಲೇಖಕ ವಿಕಾಸ್ ಕುಮಾರ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂವಿಧಾನ ಸನ್ಮಾನ ಅಭಿಯಾನದ ಜಿಲ್ಲಾ ಸಂಚಾಲಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು.