

ವಿಜಯವಾಣಿ ಸುದ್ದಿಜಾಲ ಮಂಗಳೂರು
ಏಸು ಕ್ರಿಸ್ತರ ಜನ್ಮ ದಿನವನ್ನು ಸಂಭ್ರಮಿಸುವ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ್ಯ ಸೋಮವಾರ ಆಚರಿಸಿದರು. ಕ್ರಿಸ್ಮಸ್ ಪ್ರಯುಕ್ತ ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ನೆರವೇರಿತು. ಮುಂಗಳೂರು ಧರ್ಮಪ್ರಾಂತ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಬಾರಿ ಕ್ರಿಸ್ಮಸ್ ಈವ್‌ನ ಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಭಾನುವಾರ ರಾತ್ರಿ ನೆರವೇರಿಸಿದರೆ, ಕ್ರಿಸ್‌ಮಸ್ ಪೂಜೆಯನ್ನು ಮಂಗಳೂರು ತಣ್ಣೀರುಬಾವಿ ಫಾತಿಮಾ ಚರ್ಚ್‌ನಲ್ಲಿ ಸೋಮವಾರ ಮುಂಜಾನೆ ನಡೆಸಿದರು.
ಧರ್ಮಾಧ್ಯಕ್ಷರು ತಮ್ಮ ಪ್ರವಚನದಲ್ಲಿ ಕ್ರಿಸ್ತರ ಜನನದ ಬಗ್ಗೆ ವಿವರಿಸಿದರು.
ಬಡತನವನ್ನು ಸಂಕೇತಿಸುವ ಗೋದಲಿಯಲ್ಲಿ ಜನಿಸಿದ ಏಸುಕ್ರಿಸ್ತರು ಬಡವರು ಹಾಗೂ ಸಮಾಜದಲ್ಲಿ ಕಡೆಗಣಿಸಿದ ಜನರ ಬಗ್ಗೆ ತಮ್ಮ ಕಾಳಜಿಯನ್ನು ತೋರಿದರು ಎಂದು ಅವರು ಸ್ಮರಿಸಿದರು.
ಚರ್ಚ್‌ನ ಧರ್ಮಗುರುಗಳಾದ ಫಾ.ಲಾರೆನ್ಸ್ ಡಿಸೋಜ, ಫಾದರ್ ಗೊಮ್ಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡಾರ್ವಿನ್ ಕುವೆಲ್ಲೊ, ಕಾರ್ಯದರ್ಶಿ ತೆಲ್ಮಾ ಡಿಸೋಜ ಉಪಸ್ಥಿತರಿದ್ದರು.
ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಕ್ರಿಸ್ಮಸ್ ಟ್ರೀ ಮತ್ತು ನಕ್ಷತ್ರಗಳು, ಗೋದಲಿಗಳು ಮುಖ್ಯ ಆಕರ್ಷಣೆಯಾಗಿದ್ದವು. ಕೆಲವು ಐಷಾರಾಮಿ ಹೊಟೇಲ್‌ಗಳು ಕೂಡ ಗ್ರಾಹಕರನ್ನು ಆಕರ್ಷಿಸಲು ಹೊರಭಾಗದಲ್ಲಿ ಆಕರ್ಷಕ ಗೋದಲಿಗಳು, ಒಳಭಾಗದಲ್ಲಿ ವಿಶೇಷ ಔತಣ ಕೂಟಗಳನ್ನು ಏರ್ಪಡಿಸಿದ್ದವು.
ಚರ್ಚ್‌ಗಳು ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿಗಳು ನಿರ್ಮಾಣಗೊಂಡಿದ್ದವು. ಕ್ರಿಸ್ಮಸ್ ಬಲಿಪೂಜೆ ಆರಂಭಕ್ಕೂ ಮುನ್ನ ಕ್ರಿಸ್ಮಸ್ ಸಂದರ್ಭದ ವಿಶೇಷ ಗೀತೆಗಳ ಕ್ಯಾರಲ್ಸ್ ನಡೆಯಿತು.