

ಮಂಗಳೂರು: ಕರಾವಳಿಯಲ್ಲಿ ಕಥೋಲಿಕ್ ಸಮುದಾಯದವರು ಭಾನುವಾರ ಮೊಂತಿ ಪರ್ಬವನ್ನು ಆಚರಣೆ ಮಾಡಲಿದ್ದಾರೆ. ಹಬ್ಬದ ಅಂಗವಾಗಿ ನವದಿನಗಳ ನೊವೆನಾಗಳು ನಡೆದು ಕೊನೆಯ ದಿನವನ್ನು ಹಬ್ಬದ ರೂಪದಲ್ಲಿ ಆಚರಣೆ ಮಾಡುವುದು ಕರಾವಳಿಯ ಕ್ರೈಸ್ತರ ಸಂಪ್ರದಾಯವಾಗಿದೆ. ಚರ್ಚ್‌ಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ಬಲಿಪೂಜೆಗಳು ನಡೆಯಲಿದೆ.
ಯೇಸು ಸ್ವಾಮಿಯ ತಾಯಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಕಥೋಲಿಕ್ ಕ್ರೈಸ್ತರು ಮೊಂತಿ ಪರ್ಬ ಎಂದು ಆಚರಣೆ ಮಾಡುತ್ತಾರೆ. ಹಬ್ಬದ ದಿನ ಆಶೀರ್ವಚನ ಮಾಡಿದ ಭತ್ತದ ತೆನೆಯ ಕಾಳುಗಳನ್ನು ಹಾಲಿನಲ್ಲಿ ಅಥವಾ ಪಾಯಸದಲ್ಲಿ ಬೆರೆಸಿ ಸೇವಿಸುವ ಜತೆಗೆ ಸಸ್ಯಾಹಾರದಲ್ಲಿ ಭೋಜನವನ್ನು ಕುಟುಂಬದ ಜತೆಯಲ್ಲಿ ಸವಿಯುವುದು ಈ ಹಬ್ಬದ ವೈಶಿಷ್ಟವಾಗಿದೆ.
ಪುಟಾಣಿ ಮಕ್ಕಳು ತಟ್ಟೆ, ಹೂವಿನ ಬುಟ್ಟಿಯಲ್ಲಿ ಹೂವುಗಳನ್ನು ತಂದು ಮೇರಿ ಮಾತೆಗೆ ಅರ್ಪಣೆ ಮಾಡಿಕೊಂಡು ಸಿಹಿ ತಿಂಡಿಗಳ ಜತೆಗೆ ಕಬ್ಬುಗಳನ್ನು ಪಡೆದುಕೊಳ್ಳುತ್ತಾರೆ.
ಚರ್ಚ್‌ಗಳಲ್ಲಿ ಹಬ್ಬದ ಸಂತೋಷ ಹಂಚಿಕೊಳ್ಳಲು ಎಲ್ಲ ಭಕ್ತಾದಿಗಳಿಗೆ ಕಬ್ಬು ವಿತರಣೆ ಮಾಡುವುದು ಸೇರಿದಂತೆ ಕೆಲವು ಚರ್ಚ್‌ಗಳಲ್ಲಿ ಹಬ್ಬದ ದಿನ ಸಂಜೆ ಧರ್ಮಕೇಂದ್ರ ಮಟ್ಟದಲ್ಲಿ ವಿವಿಧ ಸ್ಪರ್ಧೆ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಮೊಂತಿ ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಲಿದ್ದಾರೆ.