

ಮಂಗಳೂರು: ಗಾಯತ್ರಿ ಮಂತ್ರದ ಅನುಷ್ಟಾನದಲ್ಲಿ ವಿಪ್ರ ಸಮಾಜ ಒಂದಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮ ಸಭೆಯಲ್ಲಿ ಭಾನುವಾರ ಅವರು ಆಶೀರ್ವವಚನ ನೀಡಿದರು.
ಬ್ರಾಹ್ಮಣರು ಗಾಯತ್ರೀ ಮಂತ್ರವನ್ನು ಜಪಿಸದೇ ಇದ್ದರೆ ನಾವು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆ ಉಳಿಯಲಾರದು. ಋಷಿಗಳಿಂದ, ಸಾಧಕ ಹಿರಿಯರು ಮಾಡಿಕೊಂಡು ಬಂದ ಅನುಷ್ಟಾನವನ್ನು ನಾವು ಅನುಸರಿಸುತ್ತಿದ್ದೇವೆ. ಇದು ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದೆ ಎಂದರು.
ಎಡನೀರು ಮಠದ ಶ್ರೆ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಸಮುದಾಯವು ಉದ್ದಾರವನ್ನು ಸ್ವತಃ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿಯೂ ಈ ಸಂಸ್ಕಾರವನ್ನು ಬಿತ್ತಬೇಕು. ನಿತ್ಯವೂ 108 ಗಾಯತ್ರಿ ಮಂತ್ರವನ್ನು ಅನುಷ್ಟಾನಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು. ನಮ್ಮನ್ನು ಅನುಸರಿಸುವವರಿಗೆ ನಾವು ಮಾರ್ಗದರ್ಶಕರಾಗಬೇಕು ಎಂದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಬ್ರಾಹ್ಮಣ ಸಮುದಾಯದ ಎಲ್ಲರ ಸಹಕಾರದಲ್ಲಿ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ. ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಯುವ ಮೂಲಕ ನಮ್ಮ ಗೌರವ, ಸ್ಥಾನಮಾನವನ್ನು ಉಳಿಸಿಕೊಳ್ಳಬೇಕಿದೆಯೆಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮಾತನಾಡಿ, ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಇರಲು ಜನವರಿಯಲ್ಲಿ ಬೆಂಗಳೂರಿನಲ್ಲಿ 24 ಕೋಟಿ ಗಾಯತ್ರಿ ಜಪಯಜ್ನ ಮಾಡಲು ನಿರ್ಧರಿಸಲಾಗಿದೆ. ದ.ಕ ಸಮಿತಿ ಮಾಡಿ ಯಶಸ್ವಿಯಾದ ಈ ಕಾರ್ಯಕ್ರಮ ಮುಂದೆ ಪ್ರೇರಕವಾಗಿ ಕೆಲಸ ಮಾಡಲು ಸಹಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಟೀಲು ಕ್ಷೇತ್ರದ ಹಿರಿಯ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ದಾನಿ, ವಸಂತ ಪಾಠ ಶಿಬಿರದ ರುವಾರಿ ಸುರೇಶ್ ರಾವ್ ಕಟೀಲು ಅವರನ್ನು ಗೌರವಿಸಲಾಯಿತು.
ಬ್ರಾಹ್ಮಣ ಅಭಿವೃದ್ಧಿ ಸಮಿತಿಯ ಮಾಜಿ ನಿರ್ದೇಶಕ ಡಾ. ಬಿ.ಎಸ್ ರಾಘವೇಂದ್ರ ಭಟ್,ವೇ.ಮೂ ಸೂರ್ಯನಾರಾಯಣ ಭಟ್ ಕಶೆಕೋಡಿ, ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಆಸ್ರಣ್ಣ, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ,ಕೃಷ್ಣ ಭಟ್ ಕದ್ರಿ, ಎಂ.ಟಿ. ಭಟ್, ಸುಬ್ರಹ್ಮಣ್ಯ ಕೋರಿಯಾರ್,ಸಮಿತಿಯ ಪದಾಧಿಕಾರಿಗಳು, ಬ್ರಾಹ್ಮಣ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್ ಕಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಡಿ ಶಾಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಶ್ರೆಧರ ಹೊಳ್ಳ ವಂದಿಸಿದರು.
ಸಾಂಕ ಕೋಟಿ ಗಾಯತ್ರಿ ಜಪಯಜ್ಞ ಸಂಪನ್ನ
ಜಪಯಜ್ಞದ ಸಂಚಾಲಕರಾದ ಕಟೀಲು ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ ಅವರ ಮುಂದಾಳತ್ವದಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಜಪಯಜ್ಞವು ಬೆಳಗ್ಗೆ 6.30 ಆರಂಭಗೊಂಡು 10.30ಕ್ಕೆ ಮಹಾಪೂಜೆ ನೆರವೇರಿತು. ಉಡುಪಿ ,ದ.ಕ ಜಿಲ್ಲೆಯಿಂದ ಸಾವಿರಾರು ಮಂದಿ ವಿವಿಧ ಉಪ ಪಂಗಡಗಳಿಗೆ ಸೇರಿದ ಬ್ರಾಹ್ಮಣ ಸಮುದಾಯವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಯ ಒಂದೇ ಸೂರಿನಡಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಆಗಮಿಸಿದ ಸರ್ವರಿಗೂ ಚಿತ್ರಾಪುರ ಮಠದ ಶ್ರೆಶ್ರೆ ವಿದ್ಯೇಂದ್ರ ತೀರ್ಥ ಶ್ರೆಪಾದರು ಪ್ರಸಾದ ವಿತರಿಸಿ ಆಶೀರ್ವದಿಸಿದರು.
ಅಚ್ಚಕಟ್ಟು ನಿರ್ವಹಣೆ: ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ,ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದ ವಿತರಣೆಯಲ್ಲಿ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ ನೆರವಾದರು. ಜಿಲ್ಲೆಯ ಎಂಟು ತಾಲೂಕುಗಳ ಹಾಗೂ ಉಡುಪಿ, ಕಾಸರಗೋಡು ಜಿಲ್ಲೆಯಿಂದ ಸಂಘದ ಸದಸ್ಯರು ಆಗಮಿಸಿದ್ದರು.