17 ಕೋಟಿ ರೂಪಾಯಿಗಾಗಿ ಮಂಗಳೂರಲ್ಲಿ ಕಿಡ್ನ್ಯಾಪ್​ ಆಗಿದ್ದ ಬಾಲಕ ಕೋಲಾರದಲ್ಲಿ ಸಿಕ್ಕ!

kidnap
Published on

ಕೋಲಾರ: ಕರಾವಳಿ ಮೂಲದ ಉದ್ಯಮಿಯೊಬ್ಬರ 8 ವರ್ಷದ ಮಗನ ಕಿಡ್ನ್ಯಾಪ್ ಪ್ರಕರಣ ಮೂರು ದಿನಗಳ ಬಳಿಕ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಸುಖಾಂತ್ಯ ಕಂಡಿದೆ. ಅಪಹರಣಕಾರರ ವಶದಲ್ಲಿದ್ದ ಮಗು ಹೆತ್ತವರ ಮಡಿಲು ಸೇರಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳೂರಿನ ಉಜಿರೆ ಪೊಲೀಸ್​ ಠಾಣಾ ವ್ಯಾಪ್ತಿಯ ಉದ್ಯಮಿ ಬಿಜಾಯ್​ ಎಂಬುವರ ಪುತ್ರ ಅನುಭವ್(8)​ನನ್ನು ನಾಲ್ವರು ದುಷ್ಕರ್ಮಿಗಳ ತಂಡ ಡಿ.17 ರಂದು ಆತನ ತಾಯಿ ಕಣ್ಣೆದುರಲ್ಲೇ ಕಿಡ್ನ್ಯಾಪ್​ ಮಾಡಿ ಇಂಡಿಕಾ ಕಾರ್​ನಲ್ಲಿ ಪರಾರಿಯಾಗಿತ್ತು. ಬಿಜಾಯ್​ ಅವರು ಬಿಟ್​ ಕಾಯಿನ್​ ವ್ಯಾಪಾರಿ. ಅಪಹರಣಕಾರರು ಬಾಲಕನನ್ನು ಸುರಕ್ಷಿತವಾಗಿ ವಾಪಸ್​ ಕಳುಹಿಸಬೇಕೆಂದರೆ 100 ಬಿಟ್ ​ಕಾಯಿನ್​ ಅಂದ್ರೆ 17 ಕೋಟಿ ರೂಪಾಯಿ ಹಣಕ್ಕೆ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿರಿ ಅಯ್ಯೋ ಅಮ್ಮ… ಎನ್ನುತ್ತ ಬಂದ ಪುಟ್ಟಕಂದನನ್ನೂ ಕೊಂದೇ ಬಿಟ್ಟ! ತಾಯಿಯದ್ದು ಅರ್ಧಜೀವ…

ಬಾಲಕ ಕಿಡ್ನ್ಯಾಪ್​ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಗಳ ಫೋನ್​ ನೆಟ್​ವರ್ಕ್​ನ ಜಾಡುಹಿಡಿದ ಪೊಲೀಸ್​ ತಂಡ ಫಾಲೋ ಮಾಡುತ್ತಿತ್ತು. ಹೀಗಿರುವಾಗ ಶುಕ್ರವಾರ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೂರ್ನಹೊಸಹಳ್ಳಿಗೆ ಅಪಹರಣಕಾರರ ತಂಡ ಬಂದಿರುವ ಖಚಿತ ಮಾಹಿತಿ ಸಿಗುತ್ತಿದ್ದಂತೆ ಕೋಲಾರ ಎಸ್ಪಿ ಕಾರ್ತಿಕ್​ ರೆಡ್ಡಿ ಅವರ ಆದೇಶದ ಮೇರೆಗೆ ಮಾಸ್ತಿ ಪೊಲೀಸ್​ ಠಾಣೆ ಪಿಎಸ್​ಐ ಪ್ರದೀಪ್​ ಹಾಗೂ ಸಿಬ್ಬಂದಿ ಶನಿವಾರ ನಸುಕಿನಲ್ಲಿ ಮಹೇಶ್​ ಎಂಬುವರ ಮನೆ ಮೇಲೆ ದಾಳಿ ಮಾಡಿತ್ತು. ಅಲ್ಲಿದ್ದ ನಾಲ್ವರು ಕಿಡ್ನ್ಯಾಪರ್ಸ್​ ಜತೆಗೆ ಮತ್ತಿಬ್ಬರನ್ನ ವಶಕ್ಕೆ ಪಡೆದ ಪೊಲೀಸರು ಬಾಲಕನ್ನು ರಕ್ಷಣೆ ಮಾಡಿದ್ದಾರೆ.

ಕಿಡ್ನ್ಯಾಪರ್ಸ್​ಗಳಾದ ಮೈಸೂರಿನ ಗಂಗಾಧರ್​, ಮಂಡ್ಯದ ರಂಜಿತ್​, ಹನುಮಂತು, ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ಕಮಲ್​ ಹಾಗೂ ಅಪಹರಣಕಾರರಿಗೆ ರಕ್ಷಣೆ ನೀಡಿದ್ದ ಕೂರ್ನಹೊಸಹಳ್ಳಿಯ ಮಂಜುನಾಥ್​, ಮಹೇಶ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಷಯ ತಿಳಿದ ಬಾಲಕನ ಪೋಷಕರು ಮಂಗಳೂರಿನಿಂದ ಮಾಸ್ತಿಗೆ ಬಂದರು. ಶನಿವಾರ ಮಧ್ಯಾಹ್ನ ಮಾಸ್ತಿಗೆ ತಲುಪಿದ ಪಾಲಕರು, ಮಗುವನ್ನು ಕಂಡಾಕ್ಷಣ ಬಿಗಿದಪ್ಪಿಕೊಂಡು ಹೋದ ಜೀವ ಮತ್ತೆ ಬಂದಂತಾಗಿದೆ ಎಂದ ಕಣ್ಣೀರಿಟ್ಟರು. ಮಗುವನ್ನು ಮರಳಿ ಮಡಿಲಿಗೆ ಸೇರಿಸಿದ ಪೊಲೀಸರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿರಿ ಗ್ರಾಪಂ ಚುನಾವಣಾ ಅಖಾಡಕ್ಕೆ ‘ಪುಟ್ಟಗೌರಿ’ ಧಾರಾವಾಹಿ ನಟಿ ಎಂಟ್ರಿ, ಮೊದಲ ದಿನದ ಪ್ರಚಾರ ಹೇಗಿತ್ತು?

ಬಾಲಕ ಅನುಭವ್ ಮಾತನಾಡಿ, ಕಿಡ್ನ್ಯಾಪರ್ಸ್​ಗಳು ನನಗೆ ‌ಏನೇನೋ ಕೊಡಿಸುತ್ತಿದ್ದರು. ನಾನು ಯಾವುದನ್ನೂ ತೆಗೆದುಕೊಳ್ಳಲಿಲ್ಲ. ನೀರು ಮಾತ್ರ ಕುಡಿದೆ ಎನ್ನುತ್ತ ಅಮ್ಮನನ್ನು ತಬ್ಬಿಕೊಂಡು ಮುತ್ತಿಟ್ಟ. ಇನ್ನು ಬಾಲಕನ ತಾಯಿ ಶೆರಿಟಾ ಮಾತನಾಡಿ, ನನ್ನ ಕಣ್ಣ ಮುಂದೆಯೇ ನನ್ನ ಮಗನ ಅಪಹರಣ ಆಯಿತು. ನಾನು‌ ಬೊಬ್ಬೆ ಹಾಕಿದೆ, ಕೂಗಾಡಿದೆ. ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ನನ್ನ ಜೀವ ನನಗೆ ಮತ್ತೆ ಸಿಕ್ಕಿದೆ ಎನ್ನುತ್ತಾ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net