

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸರ್ಕಾರ ಮತ್ತು ಉದ್ಯಮದಾರರ ಕೊಂಡಿಯಾಗಿರುವ ಲೆಕ್ಕಪರಿಶೋಧಕರಿಂದ ದೇಶ, ಸಮಾಜದ ಹಿತಾಸಕ್ತಿಗೆ ಪೂರಕ ಸೇವೆ ದೊರೆಯುವುದು ಆವಶ್ಯಕವಾಗಿದೆ ಎಂದು ದಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಯುವ ಲೆಕ್ಕಪರಿಶೋಧಕರು ಹಾಗೂ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಶಾಖೆ ವತಿಯಿಂದ ನಗರದ ಪಡೀಲ್ನಲ್ಲಿರುವ ಐಸಿಎಐ ಭವನದಲ್ಲಿ ಮಂಗಳವಾರ ಜರುಗಿದ ಲೆಕ್ಕಪರಿಶೋಧಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಎಲ್ಲ ಉದ್ಯಮಗಳ ಮಾಲೀಕರು, ನಿರ್ವಾಹಕರು ಸರ್ಕಾರಕ್ಕೆ ಕನಿಷ್ಠ ತೆರಿಗೆ ಪಾವತಿಸಲು ಇರುವ ಮಾರ್ಗೋಪಾಯಗಳು ಕುರಿತು ಚಿಂತನೆ ಮಾಡುತ್ತಾರೆ. ಲೆಕ್ಕಪತ್ರಗಾರರು ಸರ್ಕಾರಗಳಿಗೆ ತೆರಿಗೆ ಸಂಗ್ರಹಿಸಲು ಮತ್ತು ಸಂಪನ್ಮೂಲಗಳನ್ನು ಪರಿಣಾಮಕಾರಿ ಹಂಚಿಕೆ ಮಾಡಲು ಸಹಾಯ ಮಾಡುತ್ತಾರೆ. ಲೆಕ್ಕಪರಿಶೋಧಕರು ತಾವು ಪ್ರತಿನಿಧಿಸುವ ಉದ್ಯಮಗಳಿಗೆ ನ್ಯಾಯ ಒದಗಿಸುವುದರ ಜತೆ, ಸರ್ಕಾರದ ಪರವಾಗಿ ಕೂಡ ಆಲೋಚನೆ ನಡೆಸಬೇಕು. ನ್ಯಾಯಯುತವಾಗಿ ಸಂಪನ್ಮೂಲ ಕ್ರೋಢಿಕರಣಕ್ಕೆ ಇರುವ ಅವಕಾಶಗಳನ್ನು ಬಳಸಿಕೊಂಡರೆ ಮಾತ್ರ ಸರ್ಕಾರ ಜನತೆಗೆ ಆವಶ್ಯಕ ಮೂಲಭೂತ ಸೌಕರ್ಯ, ಭೌತಿಕ, ಸಾಮಾಝಿಕ ಬೆಂಬಲ ಒದಗಿಸುವುದು ಸಾಧ್ಯ ಎಂದು ಅವರು ಹೇಳಿದರು.
ಸಮಾಜದಲ್ಲಿ ಲೆಕ್ಕಪರಿಶೋಧಕರ ಪಾತ್ರ ಮುಖ್ಯವಾಗಿದ್ದು, ನಿಖರ ಮತ್ತು ಸಕಾಲಿಕ ಹಣಕಾಸು ಮಾಹಿತಿ ಒದಗಿಸುವ ಮೂಲಕ ಲೆಕ್ಕಪರಿಶೋಧಕರು ದೇಶದ ಆರ್ಥಿಕ ಬೆಳವಣಿಗೆ, ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸಲು ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಕೆಲವು ಪ್ರಯತ್ನ ಗೆದ್ದ ಬಳಿಕ ತಾನು ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 48 ನೇ ರ್ಯಾಂಕ್ ಪಡೆದ ಅನುಭವವನ್ನು ಸಿಎ ವಿದ್ಯಾರ್ಥಿಗಳ ಜತೆ ಹಂಚಿಕೊಂಡ ಅವರು, ಯಾವ ಸಾಧನೆಯೂ ಅಸಾಧ್ಯವಲ್ಲ. ತಾವು ಆಯ್ದುಕೊಂಡ ಮಾರ್ಗದಲ್ಲಿ ಸಾಗುವ ಅಚಲವಾದ ನಂಬಿಕೆ ಮತ್ತು ಪರಿಶ್ರಮ ಮುಖ್ಯ ಎಂದರು.
ಮಂಗಳೂರಿಗೆ ಆಗಮಿಸುವ ಮೊದಲು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿ ಬೆಂಗಳೂರು ನಲ್ಲಿ ಕರ್ತವ್ಯ ನಿರ್ವಹಿಸವ ಸಂದರ್ಭ ಲೆಕ್ಕಪರಿಶೋಧಕರ ಜತೆ ಕೆಲಸ ಮಾಡಿದ ದಿನಗಳನ್ನು ಅವರು ನೆನಪಿಸಿಕೊಂಡರು.
ಪ್ರಸ್ತಾವನೆಗೈದ ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಕೆ. ಅವರು, ದೇಶದ ಅಭಿವೃದ್ಧಿಯ ಮುಖ್ಯ ಭಾಗವಾಗಿರುವ ಆರ್ಥಿಕ ಚಟುವಟಿಕೆಗಳಲ್ಲಿ, ಸರ್ಕಾರದ ನೀತಿ ರೂಪಿಸುವಲ್ಲಿ ಲೆಕ್ಕಪರಿಶೋಕರು ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರು ಶುಭ ಹಾರೈಸಿದರು.
ಐಸಿಎಐ ಎಸ್ಐಆರ್ಸಿಯ ಮಂಗಳೂರು ಶಾಖೆಯ ಉಪಾಧ್ಯಕ್ಷ ಡೇನಿಯಲ್ ಮಾರ್ಸ್ ಪೆರೇರಾ, ಕಾರ್ಯದರ್ಶಿ ಮಮತಾ ರಾವ್ ಉಪಸ್ಥಿತರಿದ್ದರು.