

ವೇಣುವಿನೋದ್ ಕೆ.ಎಸ್. ಮಂಗಳೂರು
ವಿಶ್ವದರ್ಜೆಗೇರುವ ಗುಂಗಿನಲ್ಲಿರುವ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಪ್ರಮುಖ ಅವಶ್ಯಕತೆಯಾಗಿರುವ ಹೆಚ್ಚುವರಿ ಪ್ಲಾಟ್‌ಫಾರ್ಮ್ ಇನ್ನೂ ಈಡೇರಿಲ್ಲ.
ಇದರಿಂದಾಗಿ ಈ ನಿಲ್ದಾಣಕ್ಕೆ ಹೆಚ್ಚುವರಿ ರೈಲುಗಳು ಬರುವುದಕ್ಕೆ ಆಗುತ್ತಿಲ್ಲ. ತನ್ಮೂಲಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದಂತಾಗಿದೆ. 2017ರ ರೈಲ್ವೆ ಬಜೆಟ್‌ನಲ್ಲಿಯೇ ಮಂಗಳೂರು ನಿಲ್ದಾಣಕ್ಕೆ ನಾಲ್ಕನೇ ಪ್ಲಾಟ್‌ಫಾರ್ಮ್ ಮಂಜೂರಾಗಿತ್ತು. 7.6 ಕೋಟಿ ರೂ. ಮೊತ್ತವನ್ನೂ ಅದಕ್ಕಾಗಿ ಮೀಸಲಿಡಲಾಗಿತ್ತು. ಇದಕ್ಕೆ ಪೂರಕವಾಗಿ ಜಾಗಕ್ಕಾಗಿ ಈಗಿರುವ ರೈಲ್ವೆ ಪಿಟ್‌ಲೈನ್‌ನ್ನು ಅಲ್ಲಿಂದ ಸ್ಥಳಾಂತರ ಮಾಡುವುದಕ್ಕೂ ಬಜೆಟ್ ಒದಗಿಸಲಾಗಿತ್ತು.
ಮೂರು ವರ್ಷ ಕಳೆದರೂ ಯಾವುದೇ ಕೆಲಸ ಮಾತ್ರ ಆಗುತ್ತಿಲ್ಲ. ಕಳೆದ ವರ್ಷವೂ ರೈಲ್ವೆ ಹೋರಾಟಗಾರರು ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿಯವರಲ್ಲಿ ಈ ವಿಚಾರ ಕೇಳಿದಾಗ, ತಾವೇ ಬಂದು ಆಗಸ್ಟ್‌ನಲ್ಲಿ ಶಿಲಾನ್ಯಾಸ ಮಾಡುವುದಾಗಿ ಭರವಸೆ ನೀಡಿದ್ದರು.
ಪ್ಲಾಟ್‌ಫಾರ್ಮ್ ಖಾಲಿ ಇಲ್ಲ!: ಸದ್ಯ ಮಂಗಳೂರು ಸೆಂಟ್ರಲ್‌ಗೆ ಯಾವ ರೈಲು ಕೇಳಿದರೂ ಪ್ಲಾಟ್‌ಫಾರ್ಮ್ ಖಾಲಿ ಇಲ್ಲ ಎನ್ನುವ ರೆಡಿಮೇಡ್ ಉತ್ತರ ಸಿಗುತ್ತದೆ. ಈಗಿರುವುದು ಒಟ್ಟು ಮೂರು ಪ್ಲಾಟ್‌ಫಾರ್ಮ್‌ಗಳು. ಈ ಮೂರೂ ಯಾವಾಗಲೂ ಭರ್ತಿಯಾಗಿರುತ್ತವೆ. ಎರಡು, ಮೂರನೇ ಪ್ಲಾಟ್‌ಫಾರ್ಮ್‌ಗಳು ಪಾರ್ಸೆಲ್‌ನಿಂದ ತುಂಬಿ ತುಳುಕುತ್ತವೆ.
ಮಂಗಳೂರಿನಂತಹ ಸ್ಟೇಷನ್‌ಗೆ ಇನ್ನೂ ಕನಿಷ್ಠ 2 ಪ್ಲಾಟ್‌ಫಾರ್ಮ್ ಬೇಕು. ಅದರಲ್ಲಿ 4ನೆಯದ್ದಾದರೂ ಆದರೆ ತಕ್ಷಣದ ಸಮಸ್ಯೆ ಪರಿಹಾರವಾಗುತ್ತದೆ. ಪ್ಲಾಟ್‌ಫಾರ್ಮ್ ಖಾಲಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗಿನ ಹೊಸ ರೈಲುಗಳು ಸದ್ಯ ಹೊರವಲಯದಲ್ಲಿರುವ ಮಂಗಳೂರು ಜಂಕ್ಷನ್‌ಗೆ ಬರುತ್ತಿವೆ. ಮುಂಬೈ ಸಿಎಸ್‌ಟಿಎಂ-ಮಂಗಳೂರು ರೈಲು ಘೋಷಣೆಯಾದದ್ದು ಮಂಗಳೂರು ಸೆಂಟ್ರಲ್‌ಗೆ ಆದರೂ ಇಲ್ಲಿ ಜಾಗ ಸಿಗದೆ ಜಂಕ್ಷನ್‌ಗೆ ಬಂದು ಹೋಗುತ್ತಿದೆ.
ಸದ್ಯ ಮಂಗಳೂರು ಸೆಂಟ್ರಲ್‌ನಿಂದ 24 ರೈಲುಗಳು ಹೊರಡುತ್ತಿವೆ ಹಾಗೂ ಅಷ್ಟೇ ಸಂಖ್ಯೆಯ ರೈಲುಗಳು ತಮ್ಮ ಪ್ರಯಾಣ ಅಂತ್ಯಗೊಳಿಸುತ್ತವೆ.
ಹೊರಡಲಿರುವ ರೈಲುಗಳನ್ನು ಶುಚಿಗೊಳಿಸುವುದಕ್ಕೆ ಒಂದು ಹೊಂಡ ಹಾಗೂ ಹಳಿ ಇರುವ ಟ್ರಾೃಕ್‌ಗಳನ್ನು ಪಿಟ್‌ಲೈನ್ ಎನ್ನುತ್ತಾರೆ. ಸದ್ಯ ಮೂರನೇ ಪ್ಲಾಟ್‌ಫಾರ್ಮ್ ಬದಿ ಇರುವ ಪಿಟ್‌ಲೈನ್‌ನ್ನು ಅಲ್ಲಿಂದ ಸ್ಥಳಾಂತರಿಸಿದರೆ ಅಲ್ಲಿ 4ನೇ ಪ್ಲಾಟ್‌ಫಾರ್ಮ್ ಹಾಕಬಹುದು ಎನ್ನುತ್ತಾರೆ ರೈಲ್ವೆ ಅಭಿವೃದ್ಧಿ ಸಮಿತಿಯ ಹನುಮಂತ ಕಾಮತ್.
ಡಬ್ಲಿಂಗ್ ಕೆಲಸ ಚುರುಕು: ಹಲವಾರು ವರ್ಷಗಳಿಂದ ಬಾಕಿ ಇದ್ದಂತಹ ಮಂಗಳೂರು ಸೆಂಟ್ರಲ್ ಹಾಗೂ ನೇತ್ರಾವತಿ ಕ್ಯಾಬಿನ್ ಮಧ್ಯೆ 1.5 ಕಿ.ಮೀ ಅಂತರದಲ್ಲಿ ರೈಲ್ವೆ ಹಳಿ ದ್ವಿಗುಣ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿರುವುದು ಸಮಾಧಾನಕರ ಬೆಳವಣಿಗೆ. 2017ರ ಬಜೆಟ್‌ನಲ್ಲಿ ಡಬ್ಲಿಂಗ್ ಘೋಷಣೆಯಾಗಿದ್ದು ಕಾಮಗಾರಿಗೆ 21 ಕೋಟಿ ರೂ. ಮೀಸಲಿಡಲಾಗಿತ್ತು.
4, 5ನೇ ಪ್ಲಾಟ್‌ಫಾರ್ಮ್ ಯೋಜನೆ: ಲಭ್ಯ ಮಾಹಿತಿ ಪ್ರಕಾರ ರೈಲ್ವೆ ಇಲಾಖೆ 4 ಮತ್ತು 5ನೇ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಯೋಜನೆ ಪ್ರಸ್ತಾಪಿಸಿದೆ. ಇದನ್ನು ಚುರುಕುಗೊಳಿಸಬೇಕಾದರೆ ದ.ಕ ಸಂಸದರು ಹಾಗೂ ಶಾಸಕರು ಒತ್ತಡ ಹೇರಬೇಕಾಗಿದೆ.
ಒಂದು ಹೆಚ್ಚುವರಿ ಪ್ಲಾಟ್‌ಫಾರ್ಮ್ ಬಂದರೆ ಕನಿಷ್ಠ ಅದರಿಂದ ದಿನಕ್ಕೆ 16 ರೈಲುಗಳು ಹೊರಡಬಹುದು. ಹಲವು ರೈಲುಗಳು ಹೊರಭಾಗದ ಜಂಕ್ಷನ್‌ಗೆ ಹೋಗುತ್ತಿರುವುದನ್ನು ಮಂಗಳೂರು ಸೆಂಟ್ರಲ್‌ವರೆಗೂ ತರಬಹುದು. ಸೆಂಟ್ರಲ್ ಮೇಲಿನ ಒತ್ತಡ ಬಹಳಷ್ಟು ಕಡಿಮೆಯಾಗಲಿದೆ. - ಹನುಮಂತ ಕಾಮತ್, ರೈಲ್ವೆ ಹೋರಾಟಗಾರ