ಹೊಸ ಪ್ಲಾಟ್‌ಫಾರ್ಮ್ ರೆಡಿ *ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಾಸಾಂತ್ಯದೊಳಗೆ ಬಳಕೆ * ರೈಲು ಸೇವೆ ವಿಸ್ತರಿಸಲು ಅವಕಾಶ

flatfarm
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಹೊಸ ಪ್ಲಾಟ್‌ಫಾರ್ಮ್.
Published on
  • ಪ್ರಕಾಶ್ ಮಂಜೇಶ್ವರ ಮಂಗಳೂರು

ಮಂಗಳೂರು ಸೆಂಟ್ರಲ್ ನಿಲ್ದಾಣದ ಬಹು ನಿರೀಕ್ಷೆಯ ಪ್ಲಾಟ್‌ಫಾರ್ಮ್ 4 ಮತ್ತು 5ರ ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳ ಕೊನೆಯೊಳಗೆ ಪ್ರಯಾಣಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಹೊಸ ಪ್ಲಾಟ್‌ಫಾರ್ಮ್‌ಗಳ ಕಾಮಗಾರಿಗೆ ರೈಲ್ವೆ ಸುರಕ್ಷತೆ ಆಯೋಗದ ಒಪ್ಪಿಗೆ ವಾರದೊಳಗೆ ದೊರೆಯುವ ನಿರೀಕ್ಷೆ ಇದೆ. ಈ ಒಪ್ಪಿಗೆ ದೊರೆತ ಇನ್ನೊಂದು ವಾರದೊಳಗೆ ಉದ್ಘಾಟನೆ ಸಾಧ್ಯವಾಗಬಹುದು ಎನ್ನುವುದು ಇಲಾಖೆಯ ಹಿರಿಯ ಅಧಿಕಾರಿಗಳ ಲೆಕ್ಕಾಚಾರ.
ಪ್ರಸ್ತುತ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಒಂದನೇ ಪ್ಲಾಟ್‌ಫಾರ್ಮ್‌ನಿಂದ ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್‌ಗಳಿಗೆ ಪ್ರಯಾಣಿಕರ ಮೇಲ್ಸೇತುವೆ (ಎಫ್‌ಒಬಿ) ಇದೆ. ಆದರೆ ಉದ್ಘಾಟನೆಗೊಳ್ಳಲು ಸಿದ್ಧವಾಗಿರುವ ಹೊಸ ಎರಡು ಪ್ಲಾಟ್‌ಫಾರ್ಮ್‌ಗಳಿಗೆ ಎಫ್‌ಒಬಿ ಇಲ್ಲದೆ ಇರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ.
ಪ್ರಯಾಣಿಕರು ತಮ್ಮ ಲಗೇಜ್ ಜತೆಗೆ ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆದರೆ ಹೊಸ ಪ್ಲಾಟ್‌ಫಾರ್ಮ್‌ಗಳಿಗೆ ಎಫ್‌ಒಬಿ ಶೀಘ್ರದಲ್ಲೇ ನಿರ್ಮಾಣಗೊಳ್ಳಬಹುದು ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಮಂಗಳೂರು ನಿರೀಕ್ಷೆ ಏನು?: ಹೊಸ 4 ಮತ್ತು 5ನೇ ಪ್ಲಾಟ್‌ಫಾರ್ಮ್‌ಗಳು ಉದ್ಘಾಟನೆ ಬಳಿಕ ಮುಂಬೈ ಸಿಎಸ್‌ಟಿ-ಮಂಗಳೂರು ಜಂಕ್ಷನ್, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಹಗಲು ರೈಲು ಹಾಗೂ ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ ಈಗಾಗಲೇ ಇಲಾಖೆ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ಇಲ್ಲಿಯ ತನಕ ಈ ಬೇಡಿಕೆ ಈಡೇರಿಸಲು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಇದೆ ಎನ್ನುವ ಕಾರಣವನ್ನು ದಕ್ಷಿಣ ರೈಲ್ವೆ ನೀಡುತ್ತಿತ್ತು.
  • ಕೇರಳೀಯರು ಸಜ್ಜು: ಕಣ್ಣೂರು-ಕೊಯಮತ್ತೂರು ಎಕ್ಸ್‌ಪ್ರೆಸ್, ಕಣ್ಣೂರು-ಎರ್ನಾಕುಳಂ ಎಕ್ಸ್‌ಪ್ರೆಸ್, ಕಲ್ಲಿಕೋಟೆ-ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕೇರಳದ ಪ್ರಯಾಣಿಕರ ಸಂಘಟನೆಗಳು ಪ್ರಯತ್ನಿಸುತ್ತಿವೆ. ಪಾಲಕ್ಕಾಡ್ ರೈಲ್ವೆ ವಿಭಾಗೀಯ ಸಲಹಾ ಸಮಿತಿ ಸಭೆಯಲ್ಲಿ ಕೂಡ ಉಭಯ ರಾಜ್ಯಗಳ ಬೇಡಿಕೆ ಕುರಿತು ಚರ್ಚೆ ನಡೆದಿದೆ. ಯಾರು ಎಷ್ಟು ಪ್ರಯೋಜನ ಪಡೆಯುತ್ತಾರೆ ಎಂದು ಕಾದು ನೋಡಬೇಕು.

ಬಾಕ್ಸ್)))))

ಮಂಗಳೂರಿನಿಂದ ವಂದೇ ಭಾರತ್
ಇಂಟರ್ ಸಿಟಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮಂಗಳೂರು ಸೆಂಟ್ರಲ್‌ನಲ್ಲಿ ಪಿಟ್‌ಲೈನ್ ಕಾಮಗಾರಿ ಉನ್ನತೀಕರಿಸುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಕೂಡಲೇ ವಂದೇ ಭಾರತ್ ಮಂಗಳೂರು ಸೆಂಟ್ರಲ್ ಮತ್ತು ತಿರುವನಂತಪುರ ಅಥವಾ ಎರ್ನಾಕುಳಂ ನಡುವೆ ಆರಂಭಗೊಳ್ಳುವ ನಿರೀಕ್ಷೆ ಇದೆ.

((( ಕ್ವೋಟ್- 1
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 4 ಮತ್ತು 5ನೇ ಪ್ಲಾಟ್‌ಫಾರ್ಮ್ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತೆ ಆಯೋಗದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ತಿಂಗಳಾಂತ್ಯದೊಳಗೆ ಪ್ರಯಾಣಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

  • ಜಯಕೃಷ್ಣ
    ಹೆಚ್ಚುವರಿ ವಿಭಾಗೀಯ ರೈಲ್ವೆ ಪ್ರಬಂಧಕರು

((( ಕ್ವೋಟ್)))

ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮತ್ತು ಮುಂಬಯಿ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿವೆ. ಮಂಗಳೂರಿನಿಂದ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಈಗಾಗಲೇ ಗರಿಷ್ಠ ಸಂಖ್ಯೆಯ ರೈಲುಗಳಿವೆ. ಆದ್ದರಿಂದ ಹೊಸ ಪ್ಲಾಟ್‌ಫಾರ್ಮ್‌ಗಳ ಮೂಲಕ ಕರ್ನಾಟಕದ ವಿವಿಧೆಡೆ ರೈಲು ಸೇವೆ ಒದಗಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ ಬೇಡಿಕೆ ಮುಂದಿಟ್ಟಿದೆ.

  • ಅನಿಲ್ ಹೆಗ್ಡೆ
    ತಾಂತ್ರಿಕ ಸಲಹೆಗಾಗರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net