ಸೆಂಟ್ರಲ್ ಮಾರ್ಕೆಟ್‌ನಲ್ಲಿ ಅಂಗಡಿ ಮತ್ತೆ ಆರಂಭ

central market
Published on

ಮಂಗಳೂರು: ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಭಾನುವಾರದಿಂದ ಮಾರುಕಟ್ಟೆಯಲ್ಲಿ ಅಂಗಡಿಗಳು ಮತ್ತೆ ತೆರೆದುಕೊಂಡಿವೆ. ಅಂಗಡಿ ಮಾಲೀಕರ ಪರವಾನಗಿ ಪರಿಶೀಲಿಸಿ, ಅರ್ಹರಿಗೆ ಮಹಾನಗರ ಪಾಲಿಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ.

ಸೆಂಟ್ರಲ್ ಮಾರುಕಟ್ಟೆ ಕಟ್ಟಡದ ಹೊರ ಆವರಣದಲ್ಲಿ ಪಾತ್ರೆ, ತರಕಾರಿ, ಹಣ್ಣು, ಪ್ಲಾಸ್ಟಿಕ್ ಸಾಮಗ್ರಿ ಮೊದಲಾದ 25ಕ್ಕೂ ಅಧಿಕ ಅಂಗಡಿಗಳು ಆರಂಭಗೊಂಡಿವೆ. ಒಳಗಡೆ ಅಂಗಡಿಗಳ ಬಾಗಿಲು ತೆರೆದಿಲ್ಲ. ಮಾರುಕಟ್ಟೆ ಪ್ರವೇಶದ ಗೇಟ್‌ಗಳಿಗೆ ಅಳವಡಿಸಿದ್ದ ಬೀಗಗಳನ್ನು ತೆಗೆಯಲಾಗಿಲ್ಲ. ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದರಿಂದ ಜನರೇಟರ್ ಬಳಸಿ ವ್ಯಾಪಾರ ಮಾಡುತ್ತಿದ್ದಾರೆ. ಶೌಚಗೃಹ ಮಾರುಕಟ್ಟೆ ಒಳಗಡೆ ಇರುವುದರಿಂದ ವ್ಯಾಪಾರಿಗಳಿಗೆ ತೊಂದರೆಯಾಗಿದೆ.

ಲಕ್ಷಾಂತರ ರೂ. ನಷ್ಟ

ಆರು ತಿಂಗಳಿಂದ ಅಂಗಡಿಗಳು ಬಂದ್ ಆಗಿರುವ ಕಾರಣ ಅಲ್ಲಿದ್ದ ಕೆಲವು ವಸ್ತುಗಳು ಹಾಳಾಗಿವೆ. ಮಳೆಗಾಲವಾದ ಕಾರಣ ಫಂಗಸ್ ಬಂದಿದ್ದು, ಮಾರಾಟಕ್ಕೆ ಯೋಗ್ಯವಾಗಿಲ್ಲ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆ ಒಳಗಿನ ವ್ಯಾಪಾರಿಗಳಿಗೂ ಗೇಟ್ ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಸೋಮವಾರ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಲಿದ್ದೇವೆ ಎಂದು ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ ಹಸನ್ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರ ಬಿರುಸು

ಸ್ಟೇಟ್‌ಬ್ಯಾಂಕ್, ಲೇಡಿಗೋಶನ್, ಸೆಂಟ್ರಲ್ ಮಾರುಕಟ್ಟೆ ಹೊರಭಾಗ ಬೀದಿಬದಿ ವ್ಯಾಪಾರ ಬಿರುಸುಗೊಂಡಿದೆ. ಹಣ್ಣು, ತರಕಾರಿ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಈ ವಾರದಿಂದ ಪಾಲಿಕೆ ಅನಧಿಕೃತ ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಟೈಗರ್ ಕಾರ್ಯಾಚರಣೆ ನಡೆಸಿ ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಮಾಡಲು ಪಾಲಿಕೆ ನಿರ್ಧರಿಸಿದೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ 264 ಚಿಲ್ಲರೆ ಮಾರಾಟದ ಅಂಗಡಿಗಳಿವೆ. ಬಹುತೇಕ ಅಂಗಡಿಗಳಲ್ಲಿ ಪರವಾನಗಿ ಪಡೆದವರು ವ್ಯಾಪಾರ ನಡೆಸುತ್ತಿಲ್ಲ. ಅದನ್ನು ಇನ್ಯಾರಿಗೋ ನಡೆಸಲು ಕೊಟ್ಟಿರುವುದು ಗಮನಕ್ಕೆ ಬಂದಿದೆ. ಇನ್ಮುಂದೆ ಮೂಲ ಪರವಾನಗಿ ಹೊಂದಿರುವವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು.

ದಿವಾಕರ ಪಾಂಡೇಶ್ವರ, ಮಂಗಳೂರು ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net