

ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಕ್ಕೆ ಪಾಲಿಕೆ ಹೊರಡಿಸಿದ ನಿಷೇಧ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಜೂ.9ರಿಂದ ಹಿಂದಿನಂತೆ ಸಗಟು ಹಾಗೂ ಚಿಲ್ಲರೆ ವ್ಯಾಪಾರ ಪುನರಾರಂಭಗೊಳ್ಳಲಿದೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಂದರ್ಭ ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರಾರಂಭದಲ್ಲಿ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿ ಆದೇಶ ಹೊರಡಿಸಿತ್ತು. ಶಿಥಿಲಗೊಂಡಿರುವ ಸೆಂಟ್ರಲ್ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕಾರಣ ಎಲ್ಲ ರೀತಿಯ ವ್ಯಾಪಾರ ಸ್ಥಗಿತಕ್ಕೆ ಪಾಲಿಕೆ ಏ.7ರಂದು ಆದೇಶಿಸಿತ್ತು.
ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರವನ್ನು ಸಗಟು ವ್ಯಾಪಾರಸ್ಥರು ವಿರೋಧಿಸಿದ್ದರು. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂದು ನಗರದಲ್ಲೇ ಅವಕಾಶಕ್ಕೆ ಒತ್ತಾಯಿಸಿದ್ದರು. ಜಿಲ್ಲಾಡಳಿತ ಒತ್ತಡಕ್ಕೆ ಮಣಿಯದಿದ್ದಾಗ ಅನಿವಾರ್ಯವಾಗಿ ಸ್ಥಳಾಂತರಗೊಂಡಿದ್ದರು. ಅಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಮಾರುಕಟ್ಟೆ ಒಳಗಿನ ವ್ಯಾಪಾರಸ್ಥರಿಗೂ ಪಾಲಿಕೆ ತರಾತುರಿಯಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿತ್ತು. ಖಾಸಗಿ ಸ್ಥಳದಲ್ಲಿ ಶೆಡ್ ಕಟ್ಟಿರುವುದಕ್ಕೆ ಜಾಗದ ಮಾಲೀಕರು ಪಾಲಿಕೆಗೆ ನೋಟಿಸ್ ನೀಡಿದ್ದರು.
ವ್ಯಾಪಾರಿಗಳ ಸಿದ್ಧತೆ: ಪಾಲಿಕೆ ಆದೇಶ ಹೊರಡಿಸುವುದಕ್ಕಿಂತ ಕೆಲವೇ ದಿನಗಳ ಹಿಂದೆ ಟ್ರೇಡ್ ಲೈಸೆನ್ಸ್ ನೀಡಿದ್ದು, ಸೆಂಟ್ರಲ್ ಮಾರುಕಟ್ಟೆ ಕಟ್ಟಡ ನೆಲಸಮ ಮಾಡುವ ಉದ್ದೇಶವಿದ್ದರೆ ಲೈಸೆನ್ಸ್ ನವೀಕರಣ ಮಾಡುವ ಅಗತ್ಯ ಏನಿತ್ತು? ಪರ್ಯಾಯ ವ್ಯವಸ್ಥೆ ಮಾಡದೆ ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ ಎಂದು ವ್ಯಾಪಾರಸ್ಥರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಮಂಗಳವಾರದಿಂದ ವ್ಯಾಪಾರ ವಹಿವಾಟು ಆರಂಭಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ವ್ಯಾಪಾರಸ್ಥರು ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಅವರನ್ನು ಭೇಟಿ ಮಾಡಿ ಹೈಕೋರ್ಟ್ ಆದೇಶವನ್ನು ಗಮನಕ್ಕೆ ತಂದು ವ್ಯಾಪಾರಕ್ಕೆ ಅವಕಾಶ ನೀಡಲು ಕೋರಿದ್ದಾರೆ. ಇದಕ್ಕೆ ಸಮ್ಮತಿಸಿದ್ದಾರೆ ಎಂದು ವ್ಯಾಪಾರಸ್ಥರ ಸಂಘದ ಸದಸ್ಯ ಹನೀಫ್ ಮಲಾರ್ ತಿಳಿಸಿದ್ದಾರೆ.
ಸೆಂಟ್ರಲ್ ಮಾರುಕಟ್ಟೆ ವಿಚಾರ ನ್ಯಾಯಾಲಯದಲ್ಲಿದೆ. ಪ್ರಕರಣವನ್ನು ಮಹಾನಗರಪಾಲಿಕೆ ನೋಡಿಕೊಳ್ಳುತ್ತಿದ್ದು, ಈ ಬಗ್ಗೆ ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆಯಲಾಗುವುದು. ವ್ಯಾಪಾರಿಗಳು ಅಲ್ಲೇ ವ್ಯಾಪಾರ ಮಾಡುವ ಕುರಿತು ಯಾವುದೇ ಮಾಹಿತಿ ಗಮನಕ್ಕೆ ಬಂದಿಲ್ಲ. - ಸಿಂಧೂ ಬಿ.ರೂಪೇಶ್, ಜಿಲ್ಲಾಧಿಕಾರಿ ದ.ಕ