ಮಂಗಳೂರು - ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಣೆ

Screenshot_20250225_211729_Google
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಿಸಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶಿಸಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು (56625) ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಬೆಳಗ್ಗೆ 5.18 ಕ್ಕೆ ಕಬಕ ಪುತ್ತೂರು ಮತ್ತು 6.30 ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಲಿದೆ.

ಸುಬ್ರಹ್ಮಣ್ಯ ರೋಡ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ (56626) ಬೆಳಗ್ಗೆ 7 ಗಂಟೆಗೆ ಸುಬ್ರಹ್ಮಣ್ಯ ರೋಡ್‌ನಿಂದ ಹೊರಟು 7.48 ಕ್ಕೆ ಕಬಕ ಪುತ್ತೂರು ಮತ್ತು ಬೆಳಗ್ಗೆ 9.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ (56627) ಸಂಜೆ 5.45 ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 7.03 ಕ್ಕೆ ಕಬಕ ಪುತ್ತೂರು ಮತ್ತು 8.10 ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪುವುದು. ಸುಬ್ರಹ್ಮಣ್ಯ ರೋಡ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ (56628) ರಾತ್ರಿ 8.40 ಕ್ಕೆ ಸುಬ್ರಹ್ಮಣ್ಯ ರೋಡ್‌ನಿಂದ ಹೊರಟು 9.30 ಕ್ಕೆ ಕಬಕ ಪುತ್ತೂರು ಮತ್ತು 11.10 ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು.

ಪರಿಷ್ಕೃತ ಆದೇಶವು ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

* ಸಂಸದ ಕ್ಯಾ. ಚೌಟ ಹರ್ಷ

ಈ ರೈಲು ವಿಸ್ತರಣೆಗೆ ಮಂಜೂರಾತಿ ಲಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು, ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಿರುವುದಕ್ಕೆ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖ್ಯಾತೆ ಸಚಿವರಾದ ವಿ. ಸೋಮಣ್ಣ ಹಾಗೂ ರೈಲ್ವೆ ಮಂಡಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸೇವೆಯನ್ನು ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಜನರು- ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಬ್ರಹ್ಮಣ್ಯ ರಸ್ತೆ ಸ್ಟೇಷನ್‌ಗೆ ವಿಸ್ತರಿಸಬೇಕೆಂಬುದು ಸುಮಾರು ಎರಡು ದಶಕಗಳ ಬೇಡಿಕೆಯಾಗಿತ್ತು. ಸಂಸದನಾದ ಬಳಿಕ ನಡೆದ ಸಂಸತ್ತಿನ ಮೊದಲ ಅಧಿವೇಶನದಲ್ಲೇ ಈ ರೈಲು ವಿಸ್ತರಣೆ ಬೇಡಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವರ ಗಮನಸೆಳೆದಿದ್ದೆ. ಇತ್ತೀಚೆಗಷ್ಟೇ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಈ ಪ್ಯಾಸೆಂಜರ್ ರೈಲನ್ನು ಆದಷ್ಟು ಬೇಗ ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದೆ. ಇದೀಗ ಕರಾವಳಿ ರೈಲ್ವೆ ಯಾತ್ರಿಕರ ಅನುಕೂಲಕರವಾಗುವಂತೆ ಬಹುಬೇಡಿಕೆಯಾಗಿರುವ ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್ ಟ್ರೈನ್ ಅನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಕೂಡ ರೈಲ್ವೆ ಮಂಡಳಿ ಪ್ರಕಟಿಸಿರುವುದು ಜಿಲ್ಲೆಯ ಜನತೆ ಹಾಗೂ ಸಂಸದನ ನೆಲೆಯಲ್ಲಿ ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ ಎಂದು ಕ್ಯಾ. ಚೌಟ ಪ್ರತಿಕ್ರಿಯಿಸಿದ್ದಾರೆ.

*****

ಮಂಗಳೂರಿನಿಂದ ನಮ್ಮ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕಬಕ - ಪುತ್ತೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಿಸಬೇಕೆಂಬ ನಮ್ಮ ಹಲವು ಕಾಲದ ಬೇಡಿಕೆ ಈಡೇರಿದೆ. ನಮ್ಮ ಮನವಿಗೆ ಒತ್ತಾಸೆಯಾಗಿ ನಿಂತು ರೈಲ್ವೆ ಸಚಿವಾಲಯದೊಂದಿಗೆ ನಿರಂತರ ಸಂವಹನ ನಡೆಸಿದ ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ನಂತರದ ದಿನಗಳಲ್ಲಿ ಈ ಪ್ರಯತ್ನ ಮುಂದುವರೆಸಿದ ಸಂಸದ ಬ್ರಿಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರೈಲು ಯಾತ್ರಿಗಳ ಪರವಾಗಿ ಧನ್ಯವಾದಗಳು.

* ಹನುಮಂತ ಕಾಮತ್

ರೈಲ್ವೆ ಹೋರಾಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net