

ಮಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಪ್ರೊ.ಸಂಜಯ್ ಪಾಸ್ವಾನ್ ಸಪತ್ನೀಕರಾಗಿ ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದು ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನ ಸಂದರ್ಶಿಸಿದರು.
ಘೋರಕ್ ಪುರದಿಂದ ನಿಯುಕ್ತಿಗೊಂಡು ಕದ್ರಿ ಜೋಗಿ ಮಠದ ಅರಸರಾಗಿ ಬರುವ ಪರಂಪರೆಯಿಂದಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತವನ್ನು ಬೆಸೆಯುವ ಪವಿತ್ರ ಕ್ಷೇತ್ರ ಕದ್ರಿಯ ಅವಿಲೋಕಿತೇಶ್ವರ, ಗಂಗಾ ಭಾಗೀರಥಿ ಸಂಗಮದ ತೀರ್ಥ ಕೆರೆಗಳ ಪ್ರಾಕೃತಿಕ ವಿಸ್ಮಯಗಳನ್ನು ಕಂಡು ಪಾಸ್ವಾನ್ ಅವರು ಬೆರಗಾದರು. ಇಲ್ಲಿನ ವೈಶಿಷ್ಟ್ಯತೆಯ ಕುರಿತು ಬಿಹಾರದ ಜನತೆಗೆ ಮಾಹಿತಿ ನೀಡುವುದಾಗಿ ಅವರು ಹೇಳಿದರು.
ಈ ಸಂದರ್ಭ ಕ್ಷೇತ್ರದ ಅರ್ಚಕರಾದ ವಾಸುದೇವ ಅಡಿಗರು ಪಾಸ್ವಾನ್ ದಂಪತಿಗೆ ಶಾಲು ಹೊದಿಸಿ, ದೇವರ ಪ್ರಸಾದ ನೀಡಿ ಗೌರವಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ಮರಣಿಕೆಯಿತ್ತು ಅಭಿನಂದಿಸಿದರು, ಅರ್ಚಕ ಕೃಷ್ಣ ಅಡಿಗ, ದೇವಳದ ಸಿಬ್ಬಂದಿ ಅರುಣ್ ಕದ್ರಿ ಮೊದಲಾದವರಿದ್ದರು.