ವಿಶ್ವದರ್ಜೆಯ ರೈಲ್ವೆ ನಿಲ್ದಾಣವಾಗಿ ಮಂಗಳೂರು ಸೆಂಟ್ರಲ್

mng-july17-railway5
Published on

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆದು ಮುಂದಿನ ಮಾಚ್‌ರ್ನೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಸುಮಾರು 300 ಕೋಟಿ ರೂ. ಗಳಲ್ಲಿ ನಡೆಯಲಿರುವ ಈ ಅಭಿವೃದ್ಧಿ ಕಾಮಗಾರಿಗಳು 3 ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದು, ನಾನೇ ಸಚಿವನಾಗಿದ್ದಲ್ಲಿ 2 ವರ್ಷಗೊಳಗೆ ಪೂರ್ಣಗೊಳಿಸಿ ಕೇಂದ್ರ ರೈಲ್ವೆ ಸಚಿವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದರು.

ಮೋದಿ ಪ್ರಧಾನಿ ಆದ ಬಳಿಕ 1924 ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ. ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ಠಾಣೆಯನ್ನು 1000 ಕೋಟಿರೂ.ಗಳಲ್ಲಿ ವಿಶ್ವಕ್ಕೆ ಮಾದರಿಯಾಗಿ ಮಾಡುವ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಗೊಂಡಿದೆ ಎಂದರು.

ರೈಲ್ವೆ ಇಲಾಖೆಯ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಲು ಪ್ರತೀ ದಿನ ಹಿಂದಿ ಕಲಿಕೆ ಆರಂಭಿಸಿದ್ದೇನೆ, ಈ ಹಿಂದೆ ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ ಎಂದು ಪ್ರತಿಭಟನೆ ಮಾಡಿದ್ದೆ, ಆದರೆ ಇಂದು ಅಭಿವೃದ್ದಿಗಾಗಿ ಹಿಂದಿ ಅಗತ್ಯ ಎಂದು ಮನಗಂಡು ಪ್ರತಿ ದಿನ ಹಿಂದಿ ಅಭ್ಯಾಸ ಮಾಡುತ್ತಿದ್ದೇನೆ. ಇದರಿಂದ ರೈಲ್ವೆ ಅಧಿಕಾರಿಗಳ ಜತೆ ಮುಕ್ತವಾಗಿ ಮಾಡನಾಡಲು ಸಾಧ್ಯವಿದೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ರೈಲ್ವೆ ಇಲಾಖೆಯ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂದು ಸೂಚನೆ ನೀಡಿದ್ದೇನೆ. ಮುಂದಿನ ಆರು ತಿಂಗಳಲ್ಲಿ ಹಿಂದಿಯಲ್ಲಿ ಕಾಗದ ಬರೆಯುವ ಜತೆಗೆ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತನಾಡಲು ಸಿದ್ಧನಾಗುತ್ತಿದ್ದೇನೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರೈಲ್ವೆ ಬಳಕೆದಾರರ ಪರವಾಗಿ ಹನುಮಂತ ಕಾಮತ್, ಜಿ.ಕೆ. ಭಟ್ ಇದ್ದರು.

-----------------

ಕೊಂಕಣ್ ರೈಲ್ವೆ ಪಿಆರ್‌ಒ ತರಾಟೆಗೆ

ಸಾರ್ವಜನಿಕರ, ಪತ್ರಕರ್ತರ ಕರೆಗೆ ಸಮರ್ಪಕವಾಗಿ ಸ್ಪಂಧಿಸದ ಕಂಕಣ್ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್‌ಓ) ಅವರನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ತರಾಟೆಗೆ ತೆಗೆದುಕೊಂಡರು. ಈ ವೇಳೆ ಧ್ವನಿಗೋಡಿಸಿದ ಸಂಸದ ಕ್ಯಾ. ಬ್ರಜೇಶ್ ಚೌಟ ಅವರೂ ಕೂಡ ಪಿಆರ್‌ಓ ತನ್ನ ಕರೆಯನ್ನೂ ಸ್ವೀಕರಿಸದ ಬಗ್ಗೆ ಸಚಿವರಲ್ಲಿ ತಿಳಿಸಿದರು. ಈ ಬಗ್ಗೆ ಯಾವುದೇ ದೂರುಗಳು ಬರದಂತೆ ಸಮರ್ಪಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net