

ಮಂಗಳೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ಅವರ ವಿಶ್ವಾಸವನ್ನು ಗಳಿಸಿ ವ್ಯವಹಾರದ ನೆಪದಲ್ಲಿ 64ಲಕ್ಷ ರೂ. ವಂಚನೆಗೈದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ನಿವಾಸಿಯಾಗಿರುವ ವಿಚ್ಚೇದಿತ ಮಹಿಳೆಗೆ ಆಕೆಯ ಅಣ್ಣಂದಿರು ಮರುಮದುವೆಗೆ ತಯಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ದೂರುದಾರ ಮಹಿಳೆ ತನ್ನ ಪ್ರೊೈಲ್ನ್ನು ಮುಸ್ಲಿಂ ಮ್ಯಾಟ್ರಿಮೋನಿಯಲ್ ಎಂಬ ಆಪ್‌ನಲ್ಲಿ ಅಪ್ಲೋಡ್ ಮಾಡಿದ್ದರು. ತಮಿಳುನಾಡಿನ ಪಳ್ಳಪಟ್ಟಿ ಮೂಲದ ಮೊಹಮ್ಮದ್ ರೀದ್ ಶೇಖ್ ಎಂಬಾತನ ರಿಕ್ವೆಸ್ಟ್ ಬಂದಿದ್ದು, ನಂತರ ಮಹಿಳೆಯ ನಂಬರ್‌ನ್ನು ಆತನು ಪಡೆದು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದ. ಈ ಬಗ್ಗೆ ಮಹಿಳೆ ತಮ್ಮ ಅಣ್ಣಂದಿರ ಜತೆ ಬಂದು ಮಾತುಕತೆ ನಡೆಸಿ ಎಂದು ಹೇಳಿದ್ದರು. ಮೊಹಮ್ಮದ್ ರೀದ್ ಶೇಖ್ ತನ್ನ ಸೋದರರು ಎಂಬುವುದಾಗಿ ಸಾದಿಕ್ ಮತ್ತು ಮುಬಾರಕ್ ಎಂಬವರನ್ನು ಪರಿಚಯಿಸಿ, ಕಂಕನಾಡಿಯಲ್ಲಿರುವ ರೆಸ್ಟೋರೆಂಟ್‌ಗೆ ಮದುವೆ ಮಾತುಕತೆಗೆ ಬಂದಿದ್ದರು. ಆ ಸಮಯದಲ್ಲಿ ಆತ ಈ ಹಿಂದೆ ಒಂದು ಮದುವೆಯಾಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ದೂರುದಾರ ಮಹಿಳೆಯ ಅಣ್ಣನ ಬಳಿ ಮಾತನಾಡಿ, ಆದಷ್ಟು ಬೇಗ ಮದುವೆ ಮಾತುಕತೆಗೆ ಕರೆಸಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದ.
ವಾಟ್ಸಪ್ ಸಂದೇಶ: ಎರಡು ದಿನಗಳ ನಂತರ ಆತನು ತನ್ನ ವಾಟ್ಸಾಪ್ ನಂಬರಿನ ಮುಖಾಂತರ ಮಹಿಳೆಗೆ ಮೆಸೇಜ್ಗಳನ್ನು ಮಾಡಲು ಆರಂಭಿಸಿದ್ದ. ಪ್ರಾರಂಭದಲ್ಲಿ ನಂಬಿಕೆ ಗಳಿಸುವಂತೆ ಮಾತನಾಡಿ, ಆತನು ನನ್ನ ಬಳಿ ಝೂಕಿ ಆಪ್ ಇದೆ. ಅದನ್ನು ನಾನೇ ತಯಾರಿಸಿದ್ದು, ಪ್ರತಿಷ್ಠಿತ ಕಂಪನಿಗೆ ಮಾರಿದರೆ ನನಗೆ 25 ಕೋಟಿ ಹಣ ನೀಡುತ್ತಾರೆ ಎಂದು ತಿಳಿಸಿದ್ದಾನೆ. ಇದನ್ನು ಮಾರಲು ನನಗೆ 4 ಲಕ್ಷ ಪ್ರೊಸೆಸ್ ಚಾರ್ಜ್ ನೀಡಬೇಕಾಗುತ್ತದೆ. ನಾನು ಒಂದು ತಿಂಗಳೊಳಗೆ ಹಿಂದಿರುಗಿಸುವುದಾಗಿ ತಿಳಿಸಿದ್ದಾನೆ. ದೂರುದಾರರು ಆತನ ಮಾತನ್ನು ನಂಬಿ ತನ್ನ ಬ್ಯಾಂಕ್‌ನಿಂದ ಆತನ ಕರೂರು ವೈಶ್ಯ ಬ್ಯಾಂಕ್ ಖಾತೆ ನಂಬರ್ ಮತ್ತು ಆತನ ಕೊಯಂಬತ್ತೂರಿನ ರೀದ್ ುಡ್ ಕಾರ್ಪೋರೇಶನ್ ನ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ರೀತಿ ಹಂತ ಹಂತವಾಗಿ ಒಟ್ಟು 64 ಲಕ್ಷ ರೂ. ವರ್ಗಾಯಿಸಿದ್ದು, ಬಳಿಕ ಆತನಲ್ಲಿ ಕೇಳಿದಾಗ ವಿವಿಧ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.