

ಮಂಗಳೂರು: ರಾಜ್ಯದ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಮಂಗಳೂರು ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ದಕ್ಷಿಣ ಆಫ್ರಿಕಾ ಪ್ರಜೆಗಳನ್ನು ಬಂಧಿಸಿ ಅವರಿಂದ 75 ಕೋಟಿ ರೂ. ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ವಾಸವಿದ್ದ ದಕ್ಷಿಣ ಆಫಿಕಾದ ಪ್ರಜೆಗಳಾದ ಬಂಬಾ ಫಾಂಟಾ ಆಲಿಯಾಸ್ ಅಡೊನಿಸ್ ಜಬುಲೈಲ್(31) ಮತ್ತು ಒಲಿಜೊ ಇವನ್ಸ್ ಆಲಿಯಾಸ್ ಅಬಿಗೈಲ್ ಅಡೊನಿಸ್(30) ಬಂಧಿತರು. ಶುಕ್ರವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ನಗರದಲ್ಲಿ ವಶಕ್ಕೆ ಪಡೆದುಕೊಂಡು ಅವರ ಸ್ವಾಧೀನದಲ್ಲಿದ್ದ 37.878 ಕೆಜಿ ಎಂಡಿಎಂಎ ಮಾದಕ ವಸ್ತು, 4 ಮೊಬೈಲ್ ಪೋನ್, ಟ್ರಾಲಿ ಬ್ಯಾಗ್‌ಗಳು, 2 ಪಾಸ್‌ಪೋರ್ಟ್ ಮತ್ತು 18,460 ರೂ. ನಗದು ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್ ಬಳಿ ಲಾಡ್ಜ್‌ವೊಂದರಲ್ಲಿ ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಹೈದರ್ ಆಲಿಯನ್ನು ಬಂಧಿಸಿ ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆ ಮುಂದುವರಿಸಲು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ಪ್ರಮುಖ ಡ್ರಗ್ ಪೆಡ್ಲರ್ ಪತ್ತೆಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಹೈದರ್ ಆಲಿ ಮತ್ತು ಇತರರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್, ಬೆಂಗಳೂರಿನಲ್ಲಿ ವಾಸವಿದ್ದ ನೈಜೀರಿಯಾ ದೇಶದ ಪ್ರಜೆ ಪೀಟರ್ ಐಕೆಡಿ ಬೆಲೊನ್ವುನನ್ನು ಬಂಧಿಸಿ ಆತನಿಂದ 6.248 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ಕಿಂಗ್‌ಪಿನ್ ಪೆಡ್ಲರ್‌ಗಳ ಪತ್ತೆಗೆ ಕಳೆದ 6 ತಿಂಗಳುಗಳಿಂದ ಸಿಸಿಬಿ ಪೊಲೀಸರು ನಿರಂತರ ತನಿಖೆ ಮುಂದುವರೆಸಿದ್ದರು. ಆ ಸಂದರ್ಭದಲ್ಲಿ ಬೆಂಗಳೂರು ಹಾಗೂ ದೇಶದ ಇತರ ಕಡೆಗಳಿಗೆ ಎಂಡಿಎಂಎನ್ನು ವಿದೇಶಿ ಮಹಿಳಾ ಪ್ರಜೆಗಳು ವಿಮಾನ ಮಾರ್ಗದಲ್ಲಿ ಸಾಗಾಟ ಮಾಡುವ ಮಾಹಿತಿ ದೊರೆಯಿತು. ಮಾ.13ರಂದು ಈ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ನಿಗಾ ಇಟ್ಟು ಮಾ.14ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನೀಲಾದ್ರಿ ನಗರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.
* 59 ಬಾರಿ ವಿಮಾನ ಪ್ರಯಾಣ
ಬಂಬಾ ಫಾಂಟಾ ಮತ್ತು ಒಲಿಜೊ ಇವನ್ಸ್ ಕಳೆದ ಆರು ತಿಂಗಳಲ್ಲಿ ನವದೆಹಲಿ ಮತ್ತು ಬೆಂಗಳೂರು ನಡುವೆ 59 ಬಾರಿ ವಿಮಾನ ಪ್ರಯಾಣ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಇವರಿಬ್ಬರ ಬಳಿ ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಪತ್ತೆಯಾಗಿದೆ. ಬಂಬಾ ಫಾಂಟಾ 2020ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ನವದೆಹಲಿಗೆ ಬಂದು ಫುಡ್‌ಕಾರ್ಟ್ ಬ್ಯುಸಿನೆಸ್ ಮಾಡುತ್ತಿದ್ದಳು. ಕಳೆದ ಒಂದೂವರೆ ವರ್ಷದಿಂದ ಡ್ರಗ್ಸ್ ಪೂರೈಕೆ ಕೃತ್ಯ ನಡೆಸುತ್ತಿದ್ದಳು. ಒಲಿಜೊ ಇವನ್ಸ್ 2016ರ ಜುಲೈನಲ್ಲಿ ಮೆಡಿಕಲ್ ವೀಸಾದಲ್ಲಿ ಬಂದು ಬಟ್ಟೆ ವ್ಯಾಪಾರ ನಡೆಸುತ್ತಿದ್ದಳು. ಅನಂತರ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಳು.
ನವದೆಹಲಿಯಿಂದ ಮಾದಕ ವಸ್ತುವನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ದೇಶದ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು.
ನಕಲಿ ಪಾಸ್‌ಪೋರ್ಟ್ ಮತ್ತು ವೀಸಾದ ಬಗ್ಗೆ, ಈ ಪ್ರಕರಣದಲ್ಲಿ ಪಾಲ್ಗೊಂಡಿರಬಹುದಾದ ಇತರ ಆರೋಪಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ಈಗಾಗಲೇ ಪೊಲೀಸ್ ತಂಡ ನವದೆಹಲಿಗೆ ತೆರಳಿದೆ ಎಂದು ಆಯುಕ್ತರು ತಿಳಿಸಿದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ಕೆ.ರವಿಶಂಕರ್ ನಿರ್ದೇಶನದಲ್ಲಿ ಎಸಿಪಿ ಮನೋಜ್ ಕುಮಾರ್ ನಾಯ್ಕ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ, ಪಿಎಸ್‌ಐಯವರಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐಯವರಾದ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬಂದಿ ಪಾಲ್ಗೊಂಡಿದ್ದರು. ಮಂಗಳೂರು ನಗರ ಪೊಲೀಸರ ಸಾಹಸದ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.