

ಮಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ ಪ್ರಕರಣದ ಕಾರ್ಯಾಚರಣೆ ಮುಂದುವರಿಸಿದ ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಪಿಸ್ತೂಲ್ ಹಾಗೂ ಸಜೀವ ಗುಂಡು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಮಂಜೇಶ್ವರ ಕಡಂಬಾರ್‌ನ ಅಬ್ದುಲ್ ಫೈಜಲ್ ಯಾನೆ ಫೈಜು (26) ಬಂಧಿತ. ಮಂಜೇಶ್ವರದ ಮೊರ್ತಾನಾ ಎಂಬಲ್ಲಿಂದ ಈತನನ್ನು ಶನಿವಾರ ಬಂಧಿಸಿ, 1 ಪಿಸ್ತೂಲ್, 1 ಸಜೀವ ಮದ್ದುಗುಂಡು ಹಾಗೂ ಮೊಬೈಲ್ ಫೋನ್ ಸಹಿತ 2.10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಕೊಣಾಜೆ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಅಂತರ್‌ರಾಜ್ಯ ಕ್ರಿಮಿನಲ್‌ಗಳ ವಶದಿಂದ 3 ಪಿಸ್ತೂಲ್, 6 ಸಜೀವ ಗುಂಡುಗಳು, ಕಾರುಗಳು ಹಾಗೂಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಗಳ ಪೈಕಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಕ್ರಮ ಪಿಸ್ತೂಲ್‌ಗಳನ್ನು ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಭಾಗಿಯಾಗಿ ಈತ ತಲೆಮರೆಸಿಕೊಂಡಿದ್ದ.
ಮುಂದಿನ ತನಿಖೆಗೆ ಆರೋಪಿ ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.