

ಮಂಗಳೂರು: ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು 3 ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ 5 ಮಂದಿ ಕುಖ್ಯಾತ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿ, ಒಟ್ಟು 40.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ/ಮಾರಾಟಕ್ಕೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಂಧಿತ ಆರೋಪಿಗಳಿಂದ 3 ಪಿಸ್ತೂಲ್, 6 ಸಜೀವ ಗುಂಡುಗಳು ಹಾಗೂ 12,895 ಕಿ.ಗ್ರಾಂ. ಗಾಂಜಾ, 3 ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
*ಪ್ರಕರಣ 1: ನಾಟೆಕಲ್ ಪರಿಸರದಲ್ಲಿ ಬುಧವಾರ ಅನುಮಾನಾಸ್ಪದ ರೀತಿಯಲ್ಲಿ ಕಾರೊಂದು ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಬೀಮನಡಿ ಗ್ರಾಮದ ನೌಫಲ್ (38), ಪೈವಳಿಕೆ ಗ್ರಾಮದ ಸುಂಕದಕಟ್ಟೆಯ ಮನ್ಸೂರ್ (36) ಎಂಬವರನ್ನು ಬಂಧಿಸಿದ್ದಾರೆ. ಅವರಿಂದ 2 ಪಿಸ್ತೂಲ್, 4 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನ್ ಹಾಗೂ ಸ್ಕಾರ್ಪಿಯೋ ಕಾರು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 14.60 ಲಕ್ಷ ರೂ. ಆಗಬಹುದು.
ಆರೋಪಿ ನೌಫಲ್ ವಿರುದ್ಧ ಹಿಂದೆ ಕೇರಳ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ, ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಆರೋಪಿ ಮನ್ಸೂರ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂಜೀವ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿದೆ.
*ಪ್ರಕರಣ 2
ಕೇರಳದಿಂದ ಮಂಗಳೂರು ನಗರಕ್ಕೆ ಮಾದಕ ವಸ್ತು ಗಾಂಜಾ ಕೆಂಪು ಬಣ್ಣದ ಕಾರೊಂದರಲ್ಲಿ ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ನಗರದ ಅರ್ಕುಳದಲ್ಲಿ ಕಾರನ್ನು ಪತ್ತೆ ಮಾಡಿ ಗಾಂಜಾ ಸಾಗಾಟ ಮಾಡುತ್ತಿದ್ದ ಕಾಸರಗೋಡಿನ ಬಂದ್ಯೋಡ್ ಮಂಗಲ್ಪಾಡಿಯ ಅಬ್ದುಲ್ ಲತೀಫ್ ಯಾನೆ ತೋಕು ಲತೀಫ್ (29) ಎಂಬಾತನನ್ನು ಬಂಧಿಸಿದ್ದಾರೆ. ಆತ ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ 12.895 ಕಿ.ಗ್ರಾಂ ಗಾಂಜಾ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೊತ್ತ ಅಂದಾಜು 15.70 ಲಕ್ಷ ರೂ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಬ್ದುಲ್ ಲತೀಫ್ ಇತ್ತೀಚೆಗೆ ವಾಮಂಜೂರಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನೀಡಿದ ಆರೋಪಿಯಾಗಿದ್ದಾನೆ. 2024ರಲ್ಲಿ ಉಳ್ಳಾಲದಲ್ಲಿ ದಾಖಲಾದ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಗರ್ ಎಂಬಾತನಿಗೂ ಈತ ಪಿಸ್ತೂಲ್ ಮಾರಾಟ ಮಾಡಿದ್ದ. ಈ ಪ್ರಕರಣಗಳಲ್ಲಿ ಈತ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆ ಕೇರಳ ಹಾಗೂ ಕರ್ನಾಟಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ, ಹಲ್ಲೆ, ದರೋಡೆ, ಕೊಲೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿವೆ.
ಪ್ರಕರಣ 3
ಕರ್ನಾಟಕ-ಕೇರಳ ಗಿಡಭಾಗದ ತಲಪಾಡಿ ಪರಿಸರದಲ್ಲಿ ಗುರುವಾರ ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ವೋಕ್ಸ್ ವ್ಯಾಗನ್ ಪೋಲೋ ಕಾರಿನಲ್ಲಿ ಆರೋಪಿಗಳಿಬ್ಬರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ದೇವಿಪುರ ಬಳಿ ಕಾರನ್ನು ಪತ್ತೆ ಮಾಡಿ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಕಡಂಬಾರ್ ನಿವಾಸಿಗಳಾದ ಮಹಮ್ಮದ್ ಅಸ್ಗರ್ (27) ಹಾಗೂ ಮೊಹಮ್ಮದ್ ಸಾಲಿ (31) ಎಂಬವರನ್ನು ಬಂಧಿಸಿದ್ದಾರೆ.
ಈ ಆರೋಪಿಗಳ ಬಳಿಯಿಂದ ಪಿಸ್ತೂಲ್, 2 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನುಗಳು, ವೋಕ್ಸ್ ವ್ಯಾಗನ್ ಪೋಲೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 10.20 ಲಕ್ಷ ರೂ. ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಹಲ್ಲೆ, ದರೋಡೆ, ಕೊಲೆ, ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ.
ಇನ್ನೋರ್ವ ಆರೋಪಿ ಮೊಹಮ್ಮದ್ ಸಾಲಿ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಮೂರು ಪ್ರಕರಣಗಳಲ್ಲಿ 3 ಪಿಸ್ತೂಲ್‌ಗಳು, 6 ಸಜೀವ ಮದ್ದುಗುಂಡುಗಳು, 12.895 ಕಿ.ಗ್ರಾಂ ಗಾಂಜಾ, 5 ಮೊಬೈಲ್‌ಗಳು, 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ 40.50 ಲಕ್ಷ ರೂ. ಆಗಬಹುದು. ಈ ಪ್ರಕರಣಗಳಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಆಯುಕ್ತ ಅನುಪಮ್ ಅಗರ್‌ವಾಲ್ ವಿವರಿಸಿದರು.
ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್ ಹಾಗೂ ಕೆ.ರವಿಶಂಕರ್ ಉಪಸ್ಥಿತರಿದ್ದರು.