

ಮಂಗಳೂರು: ರಥಬೀದಿಯ ಗೋಕರ್ಣ ಮಠದಲ್ಲಿ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ 52ನೇ ವರ್ಷದ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು.
ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಸಂದರ್ಭದಲ್ಲಿ ಶ್ರೀ ಮಾತೆಯ ಪೂರ್ಣಾಲಂಕಾರ ಮಾಡಲಾಯಿತು. ವಿಸರ್ಜನಾ ಪೂಜೆ, ಶಾರದಾ ಮಾತೆಯ ವಿಶೇಷ ಪೂರ್ಣಾಲಂಕಾರ ದರ್ಶನ, ಪ್ರಾರ್ಥನೆ ನಂತರ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಮಂಗಳ ವಾದ್ಯ ಹಾಗೂ ಹುಲಿ ವೇಷ ವಾದ್ಯಗಳಿಂದ ರಥಬೀದಿ ಗೋಕರ್ಣ ಮಠದಿಂದ ಹೊರಟು, ಶ್ರೀ ವೆಂಕಟರಮಣ ದೇವಸ್ಥಾನ, ಗದ್ದೆಕೇರಿ, ಡೊಂಗರಕೇರಿ, ನ್ಯೂಚಿತ್ರಾ ಮೂಲಕ ರಥಬೀದಿಯಿಂದ ಮಹಾಮಾಯ ದೇವಸ್ಥಾನದ ಕೆರೆಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ವಿಧಿಪೂರ್ವಕವಾಗಿ ವಿಸರ್ಜಿಸಲಾಯಿತು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿಧ್ಯಾದೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಗಳಿಂದ ಅ.19ರಂದು ಶಾರದಾ ಮಾತೆಯ ಪ್ರತಿಷ್ಠೆ ನಡೆಯಿತು. ಸಮಿತಿ ವತಿಯಿಂದ ಶ್ರೀಗಳ ದಿವ್ಯ ಕರಕಮಲದಿಂದ ನೀಲಿಕಲ್ಲಿನ ಖಚಿತ ಸ್ವರ್ಣ ಹಾರವನ್ನು ಶ್ರೀ ದೇವರಿಗೆ ಸಮರ್ಪಿಸಲಾಗಿತ್ತು.