

ಮಂಗಳೂರು: ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ನಿಗಮ ಸ್ಥಾಪನೆಯಿಂದ ಬ್ಯಾರಿ ಜನಾಂಗಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಮೊದಲು ಅರಿತುಕೊಳ್ಳಬೇಕಿದೆ. ಅದಕ್ಕಾಗಿ ತಜ್ಞರ ಸಮಿತಿ ರಚಿಸಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು.
ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಮಹೂರ್ಂ ಬಿ.ಎಂ. ಇದಿನಬ್ಬ ಮತ್ತು ಮಹೂರ್ಂ ಬಿ.ಎ.ಮೊಯ್ದಿನ್ ಅವರ ನೆನಪಿನಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದ ಮಹೂರ್ಂ ಯು.ಟಿ. ಫರೀದ್ ವೇದಿಕೆಯಲ್ಲಿ ಬುಧವಾರ ನಡೆದ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೆ ಸರ್ಕಾರ ಸ್ಥಾಪಿಸಿದ ಕೆಲವು ನಿಗಮಗಳಿಗೆ ಅಧ್ಯಕ್ಷ, ಸದಸ್ಯರ ನೇಮಕವಾಗಿಲ್ಲ. ಅನುದಾನವೂ ಬಿಡುಗಡೆ ಮಾಡಿಲ್ಲ. ಬ್ಯಾರಿ ಅಭಿವೃದ್ಧಿ ನಿಗಮ ಹಾಗಾಗಬಾರದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಬ್ಯಾರಿ ಮುಸ್ಲಿಮರಿಗೆ ಅನೇಕ ಯೋಜನೆಗಳನ್ನು ನೀಡಲಾಗುತ್ತದೆ. ಅದರಿಂದ ಬ್ಯಾರಿ ಮುಸ್ಲಿಮರಿಗೆ ಎಷ್ಟು ಪ್ರಮಾಣದಲ್ಲಿ ಪ್ರಯೋಜನವಾಗಿದೆ ಎಂಬುದರ ಅಂಕಿ ಅಂಶ ಪಡೆದು ಅಧ್ಯಯನ ನಡೆಸಬೇಕು. ಈಗ ಕೊಡುವ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ಹೊಸ ನಿಗಮಕ್ಕೆ ಕೊಟ್ಟರೆ ಬ್ಯಾರಿ ಜನಾಂಗಕ್ಕೆ ನಷ್ಟವಾದೀತು. ನಿಗಮ ಸ್ಥಾಪಿಸುವ ಮುನ್ನ ಇದನ್ನೆಲ್ಲಾ ಯೋಚಿಸಬೇಕಿದೆ ಎಂದು ಯು.ಟಿ.ಖಾದರ್ ಹೇಳಿದರು.
ಮಹಾಸಭಾದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವಾ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ದ.ಕ.ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್, ಜಮೀಯ್ಯತುಲ್ ಫಲಾಹ್ ದ.ಕ.-ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಮಾಜಿ ಮೇಯರ್ ಕೆ.ಅಶ್ರಫ್, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಮೋನು ಕತ್ತರ್, ಮುಹಮ್ಮದ್ ಹನೀಫ್ ಹಾಜಿ, ಅನ್ವರ್ ಸಾದಾತ್ ಬಜತ್ತೂರು, ನಾಸಿರ್ ಆರ್‌ಟಿಒ ಬೆಂಗಳೂರು, ಸುಲ್ತಾನ್ ಜುವೆಲ್ಲರ್‌ನ ಅಬ್ದುಲ್ ರವೂಫ್, ಎಸ್‌ಕೆಎಸ್‌ಎಂ ಸಂಘಟನೆಯ ಅಹ್ಮದ್ ಅನ್ಸಾರ್ ಮತ್ತಿತರರು ಭಾಗವಹಿಸಿದ್ದರು. ಬ್ಯಾರಿ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಖಿಲ ಭಾರತ ಬ್ಯಾರಿ ಮಹಾಸಭಾದ ಗೌರವ ಅಧ್ಯಕ್ಷ ಡಾ. ಯು.ಟಿ.ಇಫಿಕಾರ್ ಆಲಿ ಫರೀದ್ ಅವರನ್ನು ಸನ್ಮಾನಿಸಲಾಯಿತು. ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಕಣಚೂರು ಮೋನು ಮಹಾಸಭಾದ ವೆಬ್‌ಸೈಟನ್ನು ಅನಾವರಣಗೊಳಿಸಿದರು. ಜುಬೈಲ್‌ನ ಎಕ್ಸಪರ್ಟೈಸ್ ಕಂಪೆನಿಯ ಅಧ್ಯಕ್ಷ ಶೇಖಬ್ಬ ಕರ್ನಿರೆ ಜಮಾತ್‌ಗೊಂದು ಐಪಿಎಸ್-ಐಎಎಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐಎಎಸ್-ಐಪಿಎಸ್ ಬಗ್ಗೆ ಏಸ್ ಫೌಂಡೇಶನ್‌ನ ನಝೀರ್ ಮಾಹಿತಿ ನೀಡಿದರು. ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಬ್ಯಾರಿ ಜನಾಂಗಕ್ಕೆ ಸಂವಿಧಾನದ 6ನೆ ಪರಿಚ್ಛೇದದಲ್ಲಿ ಮಾನ್ಯತೆ ನೀಡಬೇಕು ಎಂಬ ನಿರ್ಣಯವನ್ನು ಮಂಡಿಸಲಾಯಿತು.
ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಸ್ವಾಗತಿಸಿದರು. ಹಮೀದ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಕ್ಬಾಲ್ ಮುಲ್ಕಿ ನಿರ್ಣಯಗಳನ್ನು ಮಂಡಿಸಿದರು. ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು.