

ಮಂಗಳೂರು: ಸಂಘ ಸಂಸ್ಥೆಗಳಲ್ಲಿ ಹುದ್ದೆ ಮುಖ್ಯವಾಗಬಾರದು. ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡುವುದೇ ಮುಖ್ಯ ಗುರಿಯಾಗಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಆಶ್ರಯದಲ್ಲಿ ನಗರದ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾರಿ ಮಹಿಳಾ ಸಮಾವೇಶದಲ್ಲಿ ನೂತನ ಮಹಿಳಾ ಘಟಕದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಧಾರ್ಮಿಕ ಹಾಗೂ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಗಾಗಿ ಮಹಿಳಾ ಘಟಕದ ಅಗತ್ಯ ಇದೆ. ಸಮಾಜದಲ್ಲಿ ಶೇ.50ರಷ್ಟು ಮಹಿಳೆಯರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಆಗುತ್ತದೆ. ಇದರಿಂದ ಮಹಿಳಾ ಸಮಾಜದ ಬೆಳವಣಿಗೆ ಸಾಧ್ಯವಿದೆ. ನೂತನ ಬ್ಯಾರಿ ಮಹಿಳಾ ಘಟಕದ ಕಾರ್ಯಚಟುವಟಿಕೆಯು ಎಲ್ಲಾ ವರ್ಗದ ಜನರು ಗೌರವಿಸುವಂತಹ ರೀತಿಯಲ್ಲಿ ಇರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯು.ಟಿ.ಖಾದರ್ ಕರೆ ನೀಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲೀದ್ ಉಜಿರೆ ಮಾತನಾಡಿ ಸ್ಥಳೀಯಾಡಳಿತ ಸಹಿತ ಸಾರ್ವಜನಿಕವಾಗಿ ನಡೆಯುವ ಜನಸಂಪರ್ಕ ಸಭೆಗಳು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಶಾಂತಿ ಸಭೆಯಲ್ಲಿ ಬ್ಯಾರಿ ಮುಸ್ಲಿಂ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವಂತಹ ವಾತಾವರಣ ರೂಪುಗೊಳ್ಳಬೇಕು ಎಂದರು.
ಪರಿಷತ್‌ನ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಸೂರಲ್ಪಾಡಿ, ಟಿ.ಎಂ. ಶಹೀದ್ ಸುಳ್ಯ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಮಾತನಾಡಿದರು. ಅನುಪಮ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಬ್ಯಾರಿ ಮಹಿಳಾ ಕವಿಗೋಷ್ಠಿ, ಸಂವಾದ ಕಾರ್ಯಕ್ರಮ ನಡೆಯಿತು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮೀಝ ಎಂ.ಬಿ. ವರದಿ ವಾಚಿಸಿದರು.
ನೂತನ ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಹಪ್ಸಾಬಾನು ಬೆಂಗಳೂರು, ಅಧ್ಯಕ್ಷರಾಗಿ ಶಮೀಮಾ ಕುತ್ತಾರು, ಉಪಾಧ್ಯಕ್ಷರಾಗಿ ಆಯಿಶಾ ಕಲ್ಲಾಪು, ಅಸ್ಮತ್ ವಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ ಎಂ.ಬಿ., ಕಾರ್ಯದರ್ಶಿಯಾಗಿ ಸಾರಾ ಮಸ್ಕುರಿನಿಸಾ, ಆಶಿಕಾ ಇಬ್ರಾಹಿಂ, ಕೋಶಾಧಿಕಾರಿಯಾಗಿ ಸೌಧಾ ಹಾಗೂ ಎಂಟು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದಗ್ರಹಣ ಪಡೆದರು.
ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಪರಿಷತ್ ಸದಸ್ಯರಾದ ಅಬ್ದುಲ್ ಖಾದರ್ ಇಡ್ಮಾ, ಎಂ. ಮೊಯ್ದೀನ್, ಡಾ.ಸಿದ್ದೀಕ್ ಅಡ್ಡೂರು, ಆಲಿಯಬ್ಬ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ರೈಹಾನ ವಿ.ಕೆ. ಸಚ್ಚರಿಪೇಟೆ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನಿಸಾರ್ ಎಫ್. ಮುಹಮ್ಮದ್ ವಂದಿಸಿದರು.