

ಮಂಗಳೂರು:ಮಾತೃಭಾಷೆಯು ಹೃದಯದ ಭಾಷೆಯಾಗಿದೆ. ಹೃದಯದಿಂದ ಮಾತನಾಡುವ ಭಾಷೆಗೆ ತನ್ನದೇ ಆದ ಸತ್ವವಿರುತ್ತದೆ. ಬದುಕು ಸಾಗಿಸಲು ನಾವು ಇತರ ಭಾಷೆಯನ್ನು ಅವಲಂಬಿಸಿದರೂ ಕೂಡಾ ಮಾತೃಭಾಷೆಯಲ್ಲಿ ಸಿಗುವ ಕುಶಿ, ಸಂತಸ, ಸಂಭ್ರಮ ಹೇಳಲಾಗದು. ನಮ್ಮೆಲ್ಲಾ ಯೋಚನೆಗಳು, ದುಃಖ, ನೋವು, ದುಮ್ಮಾನಗಳನ್ನು ಮಾತೃಭಾಷೆಯ ಮೂಲಕ ಮಾತ್ರ ಅರ್ಥಪೂರ್ಣವಾಗಿ ವ್ಯಕ್ತಪಡಿಸಬಹುದು ಎಂದು ಲೇಖಕಿ ಶಮೀಮಾ ಕುತ್ತಾರ್ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾತೃಭಾಷೆಯು ಆಯಾ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡಿಯಾಗಿದೆ. ಅದಕ್ಕೆ ಬ್ಯಾರಿ ಭಾಷೆಯು ಹೊರತಾಗಿಲ್ಲ. ಕೇವಲ ವೇದಿಕೆಗಳಲ್ಲಿ ಭಾಷಣ ಮಾಡಿದರೆ ಮಾತೃಭಾಷೆ ಉಳಿಯದು. ಮನೆಯಲ್ಲೇ ಮಾತೃಭಾಷೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಕಳೆದ 50 ವರ್ಷದಲ್ಲಿ 220 ಭಾಷೆಗಳು ಅಳಿದಿದೆ. ಇನ್ನು ಕೆಲವು ಅಳಿವಿನ ಅಂಚಿನಲ್ಲಿವೆ. ಹಾಗಾಗಿ ಬ್ಯಾರಿ ಭಾಷೆ ಅಳಿಯದಂತೆ ಎಚ್ಚರ ವಹಿಸಬೇಕಿದೆ ಎಂದು ಶಮೀಮಾ ಕುತ್ತಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಭಾಷಾ ದಿನಾಚರಣೆಯು ಬ್ಯಾರಿಗಳ ಪಾಲಿಗೆ ಸಂಭ್ರಮದ ದಿನವಾಗಿದೆ. ಅಕಾಡಮಿ, ಅಧ್ಯಯನ ಪೀಠ, ಭವನವನ್ನು ಸರಕಾರ ನಮಗೆ ನೀಡಿದರೂ ಆಂದೋಲನದಿಂದ ವಿರಮಿಸಬಾರದು. ಬ್ಯಾರಿ ಆಂದೋಲನವನ್ನು ಮುಂದುವರಿಸುತ್ತಿರಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಪೋರೇಟರ್ ಅಬ್ದುಲ್ಲತೀಫ್ ಕಂದಕ್, ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್, ದ.ಕ. ಮದ್ರಸ ಮ್ಯಾನೇಜ್ಮೆಂಟ್‌ನ ಅಧ್ಯಕ್ಷ ಹಾಜಿ ಎಂ.ಎಚ್. ವೊಹಿದಿನ್, ಅಲ್‌ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಉಪಸ್ಥಿತರಿದ್ದರು.
ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಹಮ್ಮದ್ ಮುಸ್ತಫಾ ಕಿರಾಅತ್ ಪಠಿಸಿದರು. ಹಸನಬ್ಬ ಮೂಡುಬಿದಿರೆ ಧ್ಯೇಯಗೀತೆ ಹಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನಡುಪದವು ಸ್ವಾಗತಿಸಿದರು. ಕೋಶಾಧಿಕಾರಿ ನಿಸಾರ್ ಮುಹಮ್ಮದ್ ಫಕೀರ್ ವಂದಿಸಿದರು. ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.