

ಹರೀಶ್ ಮೋಟುಕಾನ ಮಂಗಳೂರು
ಬಹುಕಾಲದ ಬೇಡಿಕೆಯಾಗಿ, ದಶಕಗಳಿಂದ ಪ್ರಕ್ರಿಯೆಯಲ್ಲಿರುವ ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಯೋಜನೆ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಪ್ಲಾಪ್ ಆಗಿದೆ.
445 ಕೋಟಿ ರೂ. ವೆಚ್ಚದಲ್ಲಿ ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೆ ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಎರಡೆರಡು ಬಾರಿ ಟೆಂಡರ್ ಕರೆದರೂ ಗುತ್ತಿಗೆ ವಹಿಸಲು ಯಾರೂ ಮುಂದೆ ಬಾರದೆ ಯೋಜನೆಗೆ ಬಹುದೊಡ್ಡ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದಲೇ ವಿವಿಧ ಅನುದಾನ ಬಳಸಿಕೊಂಡು ಬಸ್ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.
ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರದ ವತಿಯಿಂದಲೇ ಮಾಡುವ ಬಗ್ಗೆ ತೀರ್ಮಾನಿಸಿ ಆಗಲೂ ಟೆಂಡರ್ ಕರೆಯಲಾಗಿತ್ತು. ಆಗ ಕೂಡ ಟೆಂಡರ್‌ನಲ್ಲಿ ಭಾಗವಹಿಸಲು ಗುತ್ತಿಗೆದಾರರು ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಕೆಲವು ಬಾರಿ ಟೆಂಡರ್ ಕರೆದರೂ ಫಲ ನೀಡದಿದ್ದಾಗ, ಯೋಜನೆ ಬಾಕಿಯಾಗುವುದು ಬೇಡ ಎಂಬ ನೆಲೆಯಿಂದ ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ಅದರಲ್ಲಿಯೂ ಟೆಂಡರ್‌ಗೆ ಪ್ರತಿಕ್ರಿಯೆ ಬಾರದ ಕಾರಣ ಮುಂದೇನು ಎಂಬ ಬಗ್ಗೆ ಪ್ರಶ್ನೆ ಎದುರಾಗಿದೆ.
ಟೆಂಡರ್ ವಹಿಸುವವರಿಗೆ 445 ಕೋಟಿ ರೂ. ನಿರ್ವಹಿಸುವುದು ಕಷ್ಟ ಸಾಧ್ಯ ಹಾಗೂ ಕರೊನಾ ಸಂದರ್ಭ ಹೂಡಿಕೆ ಮಾಡಲು ಗುತ್ತಿಗೆದಾರರು ಧೈರ್ಯ ಮಾಡುತ್ತಿಲ್ಲ. 445 ಕೋಟಿ ರೂ.ಗೆ ವಾರ್ಷಿಕ ಬಡ್ಡಿಯೇ 100 ಕೋಟಿ ರೂ. ಆಗುತ್ತದೆ. ಬಸ್ ನಿಲ್ದಾಣ ನಿರ್ಮಾಣವಾದ ಬಳಿಕವೂ ನಿರೀಕ್ಷಿತ ಆದಾಯ ಬರುವ ಬಗ್ಗೆ ಶಂಕೆ ಇರುವ ಕಾರಣ ಟೆಂಡರ್‌ನಲ್ಲಿ ಯಾರೂ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಂಡಿದ್ದರೂ, ಪಂಪ್‌ವೆಲ್ ಬಸ್‌ನಿಲ್ದಾಣ ಯೋಜನೆಗೆ ಮಾತ್ರ ಕಾಲ ಕೂಡಿ ಬಂದಿಲ್ಲ. ಆದರೆ, ಜನಪ್ರತಿನಿಧಿಗಳು ಮಾತ್ರ ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಎಂಬುದನ್ನು ಅವಕಾಶ ಸಿಕ್ಕಿದ ಸಂದರ್ಭದಲ್ಲೆಲ್ಲ ಹೇಳುತ್ತ್ತ ಬಂದಿದ್ದಾರೆ. ಯೋಜನೆ ಮಾತ್ರ ಕಡತದಲ್ಲಿಯೇ ಬಾಕಿಯಾಗಿದೆ.
ಏನಿದು ಬಸ್ ಟರ್ಮಿನಲ್?: ಮಂಗಳೂರಿನಲ್ಲಿ ವಾಹನ ದಟ್ಟಣೆ ನಿಭಾಯಿಸುವ ನಿಟ್ಟಿನಲ್ಲಿ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು ಅಲ್ಲಿಂದ ಹೊರಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಪಂಪ್‌ವೆಲ್‌ನಲ್ಲಿ ಬಸ್ ಟರ್ಮಿನಲ್ ಯೋಜನೆ ಜಾರಿಗೆ ನಿರ್ಧರಿಸಲಾಗಿತ್ತು. 180 ಬಸ್ ಬೇಗಳೊಂದಿಗೆ ಬಸ್ ಟರ್ಮಿನಲ್, ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಸೇವೆ ಮತ್ತು ದೂರದ ಪ್ರಯಾಣದ ಬಸ್ ವ್ಯವಸ್ಥೆಯನ್ನು ನೂತನ ಬಸ್ ಟರ್ಮಿನಲ್ ಒಳಗೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಸುಮಾರು 10 ಲಕ್ಷ ಚದರ ಅಡಿ ವಿಸ್ತೀರ್ಣದ ಶಾಪಿಂಗ್ ಮಾಲ್, ಕಚೇರಿ ಸ್ಥಳ, ನಗರದ ಜನರಿಗಾಗಿ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳ ಬಗ್ಗೆ ಉಲ್ಲೇಖಿಸಲಾಗಿತ್ತು. ಪಿಪಿಪಿ ಮಾಡೆಲ್‌ನಲ್ಲಿ ಗುತ್ತಿಗೆ ಪಡೆದವರು 40 ವರ್ಷ ಅದನ್ನು ನಿರ್ವಹಿಸಿ ನಂತರ ಬಸ್ ನಿಲ್ದಾಣವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕರಾರು ಯೋಜನೆ ಒಳಗೊಂಡಿತ್ತು.
12 ವರ್ಷಗಳ ಹಿಂದೆ ಭೂಸ್ವಾಧೀೀನ!: ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕರೆ ಖಾಸಗಿ ಜಮೀನು ಸ್ವಾಧೀನಪಡಿಸಲಾಗಿತ್ತು. ಈ ಪ್ರದೇಶಕ್ಕೆ ಮಣ್ಣು ತುಂಬಿಸುವ ಕಾರ್ಯ ಆರಂಭಗೊಂಡು 4 ವರ್ಷಗಳಾಗಿದೆ. ನಿಗದಿತ ಅವಧಿಯಲ್ಲಿ ಯೋಜನೆ ಕಾರ್ಯಗತವಾಗದಿದ್ದರೆ ಕಾಯ್ದೆಯನ್ವಯ ಸ್ವಾಧೀನಪಡಿಸಿದ ಜಾಗ ಮತ್ತೆ ಜಾಗ ಬಿಟ್ಟು ಕೊಟ್ಟವರಿಗೇ ಸೇರುತ್ತದೆ. ಆದ್ದರಿಂದ ಆದಷ್ಟು ಶೀಘ್ರ ಬಸ್ ನಿಲ್ದಾಣ ಕಾಮಗಾರಿ ಆರಂಭಿಸುವ ಹೊಣೆಗಾರಿಕೆ ಪಾಲಿಕೆ ಮುಂದಿದೆ.
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಟೆಂಡರಿನಲ್ಲಿ ಯಾರೂ ಭಾಗವಹಿಸಿಲ್ಲ. ಪಾಲಿಕೆ ವತಿಯಿಂದಲೇ ವಿವಿಧ ಮೂಲಗಳಿಂದ ಅನುದಾನ ಕ್ರೋಡೀಕರಿಸಿ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆ ಇದೆ.
- ಪ್ರೇಮಾನಂದ ಶೆಟ್ಟಿ, ಮೇಯರ್