

ಮಂಗಳೂರು: ಬಂದರ್‌ನ ಜೆಎಂ ರಸ್ತೆಯ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಮನೆಯಲ್ಲಿ ಸಂಬಂಧಿಗಳ 7 ಕುಟುಂಬಗಳು ವಾಸವಾಗಿದ್ದು, ಘಟನೆ ನಡೆದ ತಕ್ಷಣ ಮನೆಯೊಳಗಿದ್ದವರು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಬಹುತೇಕ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ.
ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ/ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ನೂರಾರು ವರ್ಷದ ಹಳೇ ಮನೆ
ಇದು ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಮನೆ. ಏಳು ಕುಟುಂಬಗಳು ಇಲ್ಲಿ ವಾಸವಾಗಿವೆ. ರಮಝಾನ್ ಆದ ಕಾರಣ ಸಾಮಾನ್ಯವಾಗಿ ಪೂರ್ವಾಹ್ನದವರೆಗೂ ಮಲಗುತ್ತೇವೆ. ಇಂದು ಕೂಡ ಅದೇ ರೀತಿ ಮಲಗಿದ್ದೆವು. ಅಷ್ಟರಲ್ಲಿ ದಾರಿಹೋಕರು ನಿಮ್ಮ ಮನೆಯಲ್ಲಿ ಹೊಗೆಯಾಡುತ್ತಿದೆ ಎಂದು ಮಾಹಿತಿ ನೀಡಿದರು. ತಕ್ಷಣ ನಾವೆಲ್ಲ ಎದ್ದು ಹೊರಬಂದೆವು. ಅಗ್ನಿಶಾಮಕದ ದಳದವರು ಬರುವಷ್ಟರಲ್ಲಿ ಮನೆಯ ಎಲ್ಲಾ ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಮನೆಯ ಗೋಡೆಗಳು ಕುಸಿದಿವೆ. ಸರ್ಕಾರ ಪರಿಹಾರ ನೀಡಿ ಬದುಕಲು ವ್ಯವಸ್ಥೆ ಕಲ್ಪಿಸಬೇಕು ಎಂದು ಈ ಮನೆಯಲ್ಲಿ ವಾಸವಾಗಿದ್ದ ಸಜೀನಾ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಮೇಯರ್ ಕೆ. ಅಶ್ರಫ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.