

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಮಂಗಳವಾರ ಬೆಳಗ್ಗಿನ ಜಾವ ಮೀನುಗಾರಿಕಾ ಬೋಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಮುಂಜಾನೆ 4.30ರ ಸುಮಾರಿಗೆ ಬೆಂಕಿ ಅವಘಡ ನಡೆದಿದ್ದು, ಶಿವಾನಂದ ಬೋಳಾರ್ ಹೊಯ್ಗೆ ಬಜಾರ್ ಎಂಬವರಿಗೆ ಸೇರಿದ ‘ವೀರಾಂಜನೇಯ‘ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಕದ್ರಿ, ಪಾಂಡೇಶ್ವರ್ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೋಟ್ ಬೆಂಕಿಗೆ ಆಹುತಿಯಾಗಿದ್ದರಿಂದ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಬೋಟ್‌ನಲ್ಲಿ ಯಾರು ಇರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬೋಟ್‌ನಲ್ಲಿ ಡೀಸೆಲ್ ಸಂಗ್ರಹ ಇದ್ದ ಕಾರಣ ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಆವರಿಸಿದ್ದು, ಬಳಿಯಲ್ಲೇ ಲಂಗರು ಹಾಕಿದ್ದ ಇತರ ಬೋಟ್‌ಗಳಿಗೆ ಬೆಂಕಿ ಹರಡುವ ಸಾಧ್ಯತೆ ಇತ್ತು. ಬೆಂಕಿ ಹಿಡಿದ ಬೋಟ್‌ನ ಹಗ್ಗವನ್ನು ತುಂಡರಿಸಿ ಬಿಟ್ಟ ಕಾರಣ ಬೋಟ್ ನೀರಿನ ಮಧ್ಯ ಭಾಗಕ್ಕೆ ಸಾಗಿದೆ. ಇದರಿಂದಾಗಿ ಇತರ ಬೋಟ್‌ಗಳಿಗೆ ಬೆಂಕಿ ತಗುಲುವುದು ತಪ್ಪಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.