

ಮಂಗಳೂರು: ಯಕ್ಷಗಾನ ಕಲೆ ಹಾದಿ ತಪ್ಪಲು ಅವಕಾಶ ನೀಡಲೇಬಾರದು. ಇದಕ್ಕಾಗಿ ಕಲಾವಿದರು ಹಾಗೂ ಮೇಳದ ಯಜಮಾನರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಬೇರೆಯವರನ್ನು ದೂರುವ ಬದಲು ನಾವೆಲ್ಲ ಸೇರಿ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಕಲೆಯನ್ನು ಒಳ್ಳೆಯದು ಮಾಡಲು ಎಲ್ಲರೂ ಜತೆಯಾಗಬೇಕು ಎಂದು ಹಿರಿಯ ಯಕ್ಷಗಾನ ವಿದ್ವಾಂಸ, ವಿಮರ್ಶಕ ಡಾ.ಎಂ. ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಶನಿವಾರ ರಾತ್ರಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಆರನೇ ವರ್ಷದ ಭ್ರಾಮರೀ ಯಕ್ಷವೈಭವ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲೆಗಳಲ್ಲಿ ಬೇಡದ್ದು ಬಂದರೆ ಅದು ಹೋಗುವುದಿಲ್ಲ. ಒಳ್ಳೆಯದು ಹೋದರೆ ಅದು ಬರುವುದಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಘನತೆ ಇದೆ. ಹೊಸ ಪ್ರೇಕ್ಷಕರನ್ನು ತಲುಪುವ ಕಾರ್ಯ ನಡೆಯಬೇಕಿದೆ ಎಂದವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಯಕ್ಷಗಾನ ಸಹಿತ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸುವ ಎಲ್ಲಾ ಆಯಾಮದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಆಶಿಸಿದರು.
ಮೇಯರ್ ಜಯಾನಂದ ಅಂಚನ್ ಅವರು ಶುಭಹಾರೈಸಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್‌ನ ಸತೀಶ್ ಮಂಜೇಶ್ವರ ಸ್ವಾಗತಿಸಿ ಪ್ರಸ್ತಾವಿಸಿದರು. ವಿನಯಕೃಷ್ಣ ಕುರ್ನಾಡು ವಂದಿಸಿದರು. ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು.
ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ
ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ (ಕುಷ್ಟ)ಗಾಣಿಗ ಅವರಿಗೆ 15 ಸಾವಿರ ರೂ. ನಗದು ಸಹಿತ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭ್ರಾಮರೀ ಯಕ್ಷಸೇವಾ ಪುರಸ್ಕಾರವನ್ನು ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಹಾಗೂ ಕಟೀಲು ಮೇಳದ ನೇಪಥ್ಯ ಕಲಾವಿದ ವಿಠಲ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಚೆಂಡೆ ಜುಗಲ್‌ಬಂದಿ, ನಾಡಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶರಣ ಸೇವಾರತ್ನ, ರಾಣಿ ಶಶಿಪ್ರಭೆ, ಶ್ರೀ ದೇವಿ ಕೌಶಿಕೆ ಯಕ್ಷಗಾನ ಪ್ರದರ್ಶನ ನಡೆಯಿತು.