ಮೇರಿಹಿಲ್ 5ನೇ ಮಹಡಿಯಿಂದ ಬಿದ್ದು ಬಾಲಕ ಮೃತ್ಯು

mng--15 march samarjith
Published on

ಮಂಗಳೂರು: ನಗರದ ಮೇರಿಹಿಲ್‌ನ ಮಾತಾ ರೆಸಿಡೆನ್ಸಿಯ ಮಹಡಿಯಿಂದ ಬಾಲಕನೋರ್ವ ಶನಿವಾರ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಅವರ ಪುತ್ರ ಸಮರ್ಜಿತ್ (13) ಮೃತ ಬಾಲಕ. ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿ.

ಶನಿವಾರ ಮುಂಜಾನೆ 5.30 - 6.50ರ ನಡುವೆ ಘಟನೆ ಸಂಭವಿಸಿದೆ. ಬಾಲಕ ಸಮರ್ಜಿತ್ ಮುಂಜಾನೆ ಯಾವುದೋ ಕಾರಣಕ್ಕೆ ವಸತಿ ಸಮುಚ್ಚಯದ 5ನೇ ಮಹಡಿಗೆ ಹೋಗಿದ್ದು, ಅಲ್ಲಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾನೆ. ಪರಿಣಾಮ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ 6.57ರ ವೇಳೆಗೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 194ರಡಿ ಅಸಹಜ ಸಾವು ಪ್ರಕರಣ ದಾಖಲಾಗಿದೆ..

ಹುಡುಗ ಬೀಳುವ ಒಂದು ಹಂತದ ದೃಶ್ಯಗಳು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಮಹಡಿಯ ಮೇಲಿನ ದೃಶ್ಯಗಳು ಕೆಮರಾದಲ್ಲಿ ಇಲ್ಲ. ಹಾಗಾಗಿ ಆತ ಬೀಳಲು ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿದೆ ಎನ್ನುತ್ತಾರೆ ಬಾಲಕನ ಕುಟುಂಬಸ್ಥರು.

ಮರಣೋತ್ತರ ಪರೀಕ್ಷೆ ನಡೆದ ಕುಂಟಿಕಾನದ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಸಂಜೆ ಕದ್ರಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಉದ್ಯಮಿಯಾಗಿದ್ದ ಸುದೇಶ್ ಅವರು ಕುಟುಂಬದವರೊಂದಿಗೆ ಮೇರಿಹಿಲ್ ಮೌಂಟ್ ಕಾರ್ಮೆಲ್ ಶಾಲೆಯ ಎದುರಿನ ವಸತಿ ಸಮುಚ್ಚಯದ 2ನೇ ಮಹಡಿಯಲ್ಲಿ ವಾಸವಾಗಿದ್ದರು. ಸಮರ್ಜಿತ್ ಚುರುಕಿನ ಹುಡುಗನಾಗಿದ್ದು, ಕಲಿಕೆಯಲ್ಲೂ ಮುಂದಿದ್ದ. ಈಜು, ಕೀಬೋರ್ಡ್ ನುಡಿಸುವುದು ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಬಹುಮಾನಗಳನ್ನು ಪಡೆಯುತ್ತಿದ್ದ. ಸಣ್ಣ ವಯಸ್ಸಿನಲ್ಲಿಯೇ ಯೂಟ್ಯೂಬ್ ವೀಡಿಯೋ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ. ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net