ಬೊಂದೆಲ್ ಸಂತ ಲಾರೆನ್ಸರ ಚರ್ಚ್ ಗೆ ತ್ರಿವಳಿ ಸಂಭ್ರಮ- ನ.18ರಂದು ನವೀಕೃತ ಚರ್ಚ್ ಉದ್ಘಾಟನೆ ಹಾಗೂ ಆಶೀರ್ವಚನ

bondel church
Published on

ಮಂಗಳೂರು: ನವೀಕೃತ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಉದ್ಘಾಟನೆ, ಶತಮಾನೋತ್ಸವ ಆಚರಣೆ ಸಮಾರೋಪ ಹಾಗೂ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಣೆ ನ.18ರಂದು ಸಂಜೆ 3 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಸುಮಾರು 15 ಸಾವಿರ ಚದರ ಅಡಿಯ, 8 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡ ಚರ್ಚ್‌ನ ಉದ್ಘಾಟನೆ ನಡೆಯಲಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ವಂ.ಆ್ಯಂಡ್ರೂೃ ಲಿಯೋ ಡಿಸೋಜ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ಬೋಂದೆಲ್ ಚರ್ಚ್‌ನ್ನು ಮಂಗಳೂರು ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಎಂಬುದಾಗಿ ಘೋಷಿಸುವರು. ಬಡವರಿಗಾಗಿ ನಿರ್ಮಾಣಗೊಂಡ 3 ಮನೆಗಳ ಹಸ್ತಾಂತರವೂ ಈ ಸಂದರ್ಭದಲ್ಲಿ ನಡೆಯಲಿದೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖಂಡರು ಮತ್ತು ಸಮಾಜದ ಗಣ್ಯರು ಉಪಸ್ಥಿತಲಿರುವರು. ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ್ಹಾ, ವಿಶ್ರಾಂತ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದೆ.

* ಹಿನ್ನೆಲೆ: ಬಜಪೆ ಅಂ.ರಾ. ವಿಮಾನ ನಿಲ್ದಾಣ ರಸ್ತೆಯ ಬೊಂದೆಲ್‌ನಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಸಂತ ಲಾರೆನ್ನರ ಸುಂದರ ದೇವಾಲಯ ಹಾಗೂ ಪುಣ್ಯಕ್ಷೇತ್ರ ಹಲವಾರು ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಶತಮಾನದ ಹಿಂದೆ ಭಾರತಕ್ಕೆ ಆಗಮಿಸಿದ ಫ್ರೆಂಚ್ ಧರ್ಮಗುರು ವಂ ಅಲೆಕ್ಸಾಂಡರ್ ದುಬೋಯ್ಸ ಇವರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅವರ ಮಾತೃಭಾಷೆ ಫ್ರೆಂಚ್‌ನಲ್ಲಿ ಬೊನ್‌ವೆಲ್’ (ಅತೀ ಸುಂದರ) ಎಂದು ಪ್ರಶಂಸಿಸಿದ ಉದ್ಘಾರವೇ ಕಾಲಕ್ರಮೇಣ ‘ಬೊಂದೆಲ್’ ಎಂಬ ಹೆಸರಿಗೆ ಕಾರಣವಾಯಿತು ಎನ್ನುವುದು ಪ್ರತೀತಿ.

1923ರ ತನಕ ಬೊಂದೆಲ್ ಒಂದು ಸ್ವತಂತ್ರ ಚರ್ಚ್ ಆಗಿರಲಿಲ್ಲ. ಅಂದಿನ ದಿನಗಳಲ್ಲಿ ಈ ಪ್ರದೇಶದ ಕ್ರೈಸ್ತ ಬಾಂಧವರು ತಮ್ಮ ಧಾರ್ಮಿಕ ಸೇವಾ ಸಂಸ್ಕಾರಗಳಿಗಾಗಿ ಏಳೆಂಟು ಮೈಲುಗಳ ದೂರದ ಮಿಲಾಗ್ರಿಸ್ ಮತ್ತು ರೊಜಾರಿಯೋ ಚರ್ಚ್‌ಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಕ್ರೈಸ್ತ ಬಾಂಧವರ ಈ ಕಷ್ಟವನ್ನರಿತ ಮಿಲಾಗ್ರಿಸ್ ಚರ್ಚ್ ಅಂದಿನ ಧರ್ಮಗುರು ವಂ. ಲುವಿಸ್ ಫನಾರ್ಂಡಿಸ್ ಅವರು ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಒಂದು ಪ್ರಾರ್ಥನಾಲಯ ನಿರ್ಮಿಸಿದರು.

1908ರಲ್ಲಿ ಸ್ಥಾಪನೆಯಾದ ಒಂದು ಶಾಲೆಯು ಆ ಜಾಗದಲ್ಲಿ ಇತ್ತು. ಮಿಲಾಗ್ರಿಸ್ ಚರ್ಚ್‌ನ ಇನ್ನೋರ್ವ ಧರ್ಮಗುರು ವಂ. ಫ್ರಾಂಕ್ ಪಿರೇರಾ ಅವರು ಶನಿವಾರದಂದು ಈ ಪ್ರಾರ್ಥನಾಲಯಕ್ಕೆ ಆಗಮಿಸಿ ಭಾನುವಾರದ ಬಲಿಪೂಜೆ ಹಾಗೂ ಇತರ ಸಂಸ್ಕಾರಗಳನ್ನು ನೆರವೇರಿಸುತ್ತಿದ್ದರು. ಕ್ರಮೇಣ 1913ರಲ್ಲಿ ಅವರು ಈ ಪ್ರಾರ್ಥನಾಲಯವನ್ನು ಶಾಲೆಯ ಸಮೇತ ಪ್ರಸ್ತುತ ಚರ್ಚ್ ಇರುವ ಜಾಗಕ್ಕೆ ಸ್ಥಳಾಂತರಿಸಿದರು. ಬಲಿಪೂಜೆ ಅರ್ಪಿಸಲು ಒಂದು ತಾತ್ಕಾಲಿಕ ಮುಳಿಹುಲ್ಲಿನ ಛಾವಣಿಯನ್ನು ನಿರ್ಮಿಸಿದರು ಹಾಗೂ ಶಾಲೆಗೆ ಒಂದು ಕಟ್ಟಡವನ್ನು ಕಟ್ಟಲು ಆರಂಭಿಸಿದರು. ಜನರ ನೆರವಿನಿಂದ 1915ರಲ್ಲಿ ಹೊಸ ಪ್ರಾರ್ಥನಾಲಯ ನಿರ್ಮಾಣವಾಯಿತು. 1917ರಲ್ಲಿ ಪ್ರಭಾರ ಧರ್ಮಗುರುಗಳಾಗಿ ನಿಯುಕ್ತಿಗೊಂಡ ವಂ. ಜುಲಿಯಾನ್ ಡಿಸೋಜ ಇವರು 1922ರಲ್ಲಿ ಮಿಲಾಗ್ರಿಸ್ ಚರ್ಚ್ ಸಹಕಾರದಿಂದ ಚಿಕ್ಕದಾಗಿದ್ದ ಬೊಂದೆಲ್ ದೇವಾಲಯದ ಕಟ್ಟಡವನ್ನು ದೊಡ್ಡದಾಗಿ ಕಟ್ಟಿಸಿದರು.

1923 ರಲ್ಲಿ ಅಂದಿನ ಬಿಷಪ್ ಅತೀ ವಂದನೀಯ ಪಾವ್ ಪೆರಿನಿ ಅವರು ಬೊಂದೆಲ್‌ನಲ್ಲಿ ಆದ ಪ್ರಗತಿಯನ್ನು ಗಮಿನಿಸಿ 1923, ಮೇ 1 ರಂದು ಬೊಂದೆಲ್ ಒಂದು ಅಧಿಕೃತ ಚರ್ಚ್ ಎಂದು ಪ್ರಕಟಿಸಿ ಈ ದೇವಮಂದಿರವನ್ನು ಸಂತ ಲಾರೆನ್ನರಿಗೆ ಸಮರ್ಪಿಸಿದರು ಹಾಗೂ ವಂ. ಫ್ರಾಂಕ್ ಪಿರೇರಾ ಇವರನ್ನು ಇಲ್ಲಿನ ಪ್ರಥಮ ಧರ್ಮಗುರುಗಳನ್ನಾಗಿ ನೇಮಿಸಿದರು. ಅಂದು ಕ್ರೈಸ್ತ ಬಾಂಧವರ ಏಕತೆಯಿಂದ ಆರಂಭಗೊಂಡ ಈ ಚರ್ಚ್‌ನ ಯಶಸ್ವಿ ಬೆಳವಣಿಗೆಗಾಗಿ ಇದುವರೆಗೆ 12 ಪ್ರಧಾನ ಧರ್ಮಗುರುಗಳು ಹಾಗೂ ಅನೇಕ ಸಹಾಯಕ ಧರ್ಮಗುರುಗಳು ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ನಿವೃತ್ತ ಶಿಕ್ಷಕಿ ಮೇರಿ ಮಿರಾಂದಾ ವಿವರಿಸಿದರು.

ಸಹಾಯಕ ಧರ್ಮಗುರು ವಿಲಿಯಂ ಡಿಸೋಜ, ಸಂತ ಲಾರೆನ್ಸ್ ಶಾಲೆ ಪ್ರಾಂಶುಪಾಲ ಪೀಟರ್ ಗೊನ್ಸಾಲ್ವಿಸ್, ಉಪಾಧ್ಯಕ್ಷ ಜಾನ್ ಡಿಸಿಲ್ವಾ, ಪ್ರಕಾಶ್ ಪಿಂಟೊ, ಸಂಯೋಜಕಿ ಪ್ರೀತಿ ಡಿಸೋಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net