

ಮಂಗಳೂರು: ಪ್ರೇಮ ಕಥೆಯನ್ನು ಹೊಂದಿರುವ ಶೇ.50ರಷ್ಟು ಮಂಗಳೂರು ಕನ್ನಡದಲ್ಲಿ ನಿರ್ಮಾಣವಾಗಿರುವ ‘ಭುವನಂ ಗಗನಂ’ ಕನ್ನಡ ಚಿತ್ರ ಫೆ.14ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಗಿರೀಶ್ ಮೂಲಿಮನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ಪೃಥ್ವಿ ಅಂಬರ್ ಮಾತಾಡಿ, ನನಗೆ ತುಳು ಭಾಷೆ, ಮಂಗಳೂರು ಅಂದ್ರೆ ಬಹಳ ಇಷ್ಟ. ಇಲ್ಲಿನ ಪ್ರೇಕ್ಷಕರು ನನ್ನ ಈ ಹಿಂದಿನ ತುಳು, ಕನ್ನಡ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ದಿಯಾ ಸಿನಿಮಾ ಬಳಿಕ ಪ್ರೇಕ್ಷಕರು ಭಾವುಕರಾಗುವ ಸನ್ನಿವೇಶ ಈ ಸಿನಿಮಾದಲ್ಲಿದೆ. ಇಲ್ಲಿನ ನೇಟಿವಿಟಿ ಸಿನಿಮಾದಲ್ಲಿ ಇರುವ ಕಾರಣ ನಿಮಗೆಲ್ಲ ಖಂಡಿತ ಇಷ್ಟವಾಗುತ್ತದೆ ಎಂದರು.
ನಟ ಪ್ರಮೋದ್ ಮಾತಾಡಿ, ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿಯಂತಹ ಸಿನಿಮಾ ಮಾಡಿದ್ದೇನೆ. ನೀವು ತುಂಬಾ ಬೆಂಬಲ ನೀಡಿದ್ದೀರಿ. ಈ ಬಾರಿ ಒಂದೊಳ್ಳೆ ಪ್ರೇಮಕತೆಯೊಂದಿಗೆ ಬಂದಿದ್ದೇನೆ. ಹೊಸಬರ ಹೊಸ ಪ್ರಯತ್ನವನ್ನು ಗೆಲ್ಲಿಸಿ. ಇದರಿಂದ ಹೊಸ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶ ಸಿಕ್ಕಂತಾಗುತ್ತದೆ ಎಂದರು.
ನಟಿ ರೇಷಲ್ ಡೇವಿಡ್ ಮಾತಾಡಿ, ಸಿನಿಮಾದಲ್ಲಿ ಮಂಗಳೂರಿನ ಭಾಷೆ ಇಲ್ಲಿನ ಸಂಸ್ಕೃತಿಯನ್ನು ತೋರಿಸಲಾಗಿದೆ. ಮಂಗಳೂರಿನ ಚಿತ್ರಪ್ರೇಮಿಗಳು ಸಿನಿಮಾ ನೋಡಿ ನಮ್ಮನ್ನು ಆಶೀರ್ವದಿಸಿ ಎಂದರು.
ನಟಿ ಪೊನ್ನು ಅಶ್ವಥಿ ಮಾತಾಡಿ, ಈ ಸಿನಿಮಾದಲ್ಲಿ ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಪ್ರೇಮಕತೆಯಿದೆ, ಎಲ್ಲರೂ ಸಿನಿಮಾ ನೋಡಿ ಎಂದರು.
ನಿರ್ಮಾಪಕ ಎಂ.ಮುನೇ ಗೌಡ ಮಾತಾಡಿ, ಸಿನಿಮಾಕ್ಕೆ ದುಬೈಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಯಾರಾದರೂ ಸಿನಿಮಾ ನೋಡಿದವರು ಸಿನಿಮಾ ಚೆನ್ನಾಗಿಲ್ಲ ಅಂತಂದ್ರೆ ಸಿನಿಮಾದ ಹಣ ವಾಪಾಸ್ ಕೊಡುತ್ತೇವೆ ಎಂದರು.
ಮಹೇಶ್ ಕುಮಾರ್, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.