ಸ್ವಾಮೀಜಿಗಳಿಂದ ಆಧ್ಯಾತ್ಮದ ನೆಲೆಗಟ್ಟು ಭದ್ರ - ಬಿಜಿಎಸ್ ಕಾವೂರು ಶಾಖಾ ಮಠದ ರಜತ ಮಹೋತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಮತ

mng-jan2-BGS5
Published on

ಮಂಗಳೂರು: ದೇಶದಲ್ಲಿ ಸ್ವಾಮೀಜಿಗಳಿಂದ ಆಧ್ಯಾತ್ಮದ ನೆಲೆಗಟ್ಟು ಭದ್ರವಾಗಿ ನೆಲೆವೂರಿದೆ. ಅವರಿಂದ ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸವಾಗುತ್ತಿದೆ. ಇದಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಶಾಖಾ ಮಠಗಳು ಸಾಕ್ಷಿಯಾಗಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕಾವೂರು ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ಗುರುವಾರ ನಡೆದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ, ಬಿಜಿಎಸ್ ಕಾವೂರು ಶಾಖಾ ಮಠದ ರಜತ ಮಹೋತ್ಸವ, ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಅಧ್ಯಯನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮಕ್ಕೆ ಸದಾ ಕಾಲಕ್ಕೆ ಆಧ್ಯತೆ ನೀಡಿರುವ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರೇರಣೆಯಿಂದ ಐಐಟಿ ಪದವೀಧರ ಲೌಕಿಕ ಪರಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿರುವ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಆಧ್ಯಾತ್ಮ ಮರೆತ ಕಾರಣ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕ್ಷೋಭೆ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಧರ್ಮ, ಆಧ್ಯಾತ್ಮ, ಸಂಸ್ಕಾರ, ಕುಟುಂಬ ಪದ್ಧತಿ, ಪೂಜಾ ಪದ್ಧತಿಗಳನ್ನು ಕಲಿಸಿ ಕೊಡುವ ಅನಿವಾರ್ಯತೆ ಇದೆ. ಭಾರತೀಯ ಸಂಸ್ಕೃತಿ ಉಳಿಸಿದಾಗ ಮಾತ್ರ ಸುಂದರ ಭಾರತ ನಿರ್ಮಾಣ ಸಾಧ್ಯ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯ ಪಟ್ಟರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ‘ಕರಾವಳಿಯ ಒಕ್ಕಲಿಗರು’ ಪುಸ್ತಕ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಬಹುಸಂಖ್ಯಾತ ಒಕ್ಕಲಿಗ ಸಮುದಾಯದವರಿಂದ ಕೂಡಿದೆ. ಸ್ವಂತಿಕೆಯನ್ನು ಬೆಳೆಸಿಕೊಂಡು ಅಂತಃಕರಣ ಸಾಕ್ಷಿಯಾಗಿ ಸಮುದಾಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಒಕ್ಕಲುಗಳಾಗಿದ್ದವರು ಭೂ ಸುಧಾರಣೆಯ ಪರಿಣಾಮ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಭಾವೈಕ್ಯತೆ, ಸಾಮರಸ್ಯ, ಪ್ರೀತಿ, ವಿಶ್ವಾಸದ ಆದರ್ಶದಲ್ಲಿ ಸಮಾಜ ಕಟ್ಟುವ ಕೆಲಸವನ್ನು ಶ್ರೀ ಆದಿಚುಂಚನಗಿರಿ ಮಠ ಮಾಡುತ್ತಿದೆ ಎಂದರು.

ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ‘ಬಿಜಿಎಸ್ ಕರಾವಳಿ ಕಲ್ಪತರು’ ಸ್ಮರಣ ಸಂಚಿಕೆ ಬಿಡುಗೆಗೊಳಿಸಿದರು. ಬಿಜಿಎಸ್ ಶಿಕ್ಷಣ ಸಂಸ್ಥೆ ಕರಾವಳಿಯ ಜನರಿಗೆ ಜ್ಞಾನ ದಾಸೋಹ ನೀಡುವ ಮೂಲಕ ಭಾರತದ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.

ಬಿಜಿಎಸ್ ಕಾವೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಎಲ್ಲ ಯತಿಶ್ರೇಷ್ಠರು ದಿವ್ಯ ಸಾನಿಧ್ಯ ವಹಿಸಿದ್ದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ಮಂಜುನಾಥ ಭಂಡಾರಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ರವಿ ಕುಮಾರ್,ಮೇಯರ್ ಮನೋಜ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ.ಎನ್.ಎಸ್.ರಾಮೇಗೌಡ, ಶ್ರೀ ಆದಿಚುಂಚನಗಿರಿ ವಿವಿ ಕುಲಪತಿ ಡಾ.ಎಂ.ಎ.ಶೇಖರ್, ದ.ಕ. ಪೊಲೀಸ್ ಅಧೀಕ್ಷಕ ಯತೀಶ್ ಎನ್. ಮೊದಲಾದವರಿದ್ದರು.

ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರಿಗೆ ರಜತ ತುಲಾಭಾರ ಮತ್ತು ಗುರುವಂದನೆ ಜರುಗಿತು.

ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ ನಿತಿನ್ ಶೆಟ್ಟಿ, ಕೇಶವ ಅಮೀನ್, ಸುರೇಶ್ ಕುಮಾರ್, ಲಕ್ಷ್ಮೀಶ ಎಡಿಯಾಳ್, ಮೊದೀನ್ ಅವರನ್ನು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಗೌರವಿಸಿದರು.

ರಜತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿದರು. ಅಧ್ಯಕ್ಷ ಪಿ.ಎಸ್.ಪ್ರಕಾಶ್ ಪ್ರಸ್ತಾವನೆಗೈದರು. ಸ್ವಾಗತ ಸಮಿತಿ ಸದಸ್ಯ ಪ್ರಶಾಂತ್ ಪೈ ವಂದಿಸಿದರು. ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಹಾಗೂ ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಮೀಜಿಗಳ ತ್ಯಾಗಮಯ ಬದುಕು

ಮಂಗಳೂರಿನ ಕಾವೂರುನಲ್ಲಿ 25 ವರ್ಷಗಳ ಹಿಂದೆ ಭಕ್ತರ ಕೋರಿಕೆಯಂತೆ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಕಲ್ಪದಂತೆ ಆರಂಭಗೊಂಡ ಅಕ್ಷರ ದಾಸೋಹ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ಹಿಂದೆ ಡಾ.ಧರ್ಮಪಾಲನಾಥ ಸ್ವಾಮೀಜಿಯವರ ಅವಿರತ ಶ್ರಮವಿದೆ. ಸ್ವಾಮೀಜಿಗಳ ಬದುಕು ತ್ಯಾಗದಿಂದ ಕೂಡಿದೆ. ಶ್ರೀ ಮಠ ಸಾಮಾಜಿಕ ಸೇವಾ ಕಾರ್ಯ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಸಮಾಜದಲ್ಲಿದ್ದ ಕೆಳಸ್ತರದ, ಶೋಷಿತ ಸಮುದಾಯ ಮುಖ್ಯ ವಾಹಿನಿಗೆ ಬರಲು ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ.ಬಾಲಂಗಾಧರನಾಥ ಸ್ವಾಮೀಜಿ ಅವರ ಕೊಡುಗೆ ಅಪಾರ. ನಾವೆಲ್ಲರೂ ಒಂದೇ ಆಗಿದ್ದು, ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ ಎಂಬುದನ್ನು ಪ್ರತಿಪಾದಿಸಿದ್ದರು.

ಶ್ರೀ ಮಾದಾರ ಚನ್ನಯ್ಯ

ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net