ಇನ್ನೊಂದು ತಿಂಗಳಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು

 ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇದ್ದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿಕೆ
  • ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ
  • ರಾಜ್ಯದಲ್ಲಿ 52,000 ಕೋ.ರೂ. ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿ

ಮಂಗಳೂರು: ಇನ್ನೊಂದು ತಿಂಗಳಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣ ಆರಂಭಗೊಳ್ಳಲಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಹಲವು ರೈಲುಗಳಿಗೆ ಚಾಲನೆ ನೀಡಲಿದ್ದು ಅದರಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ಕೂಡ ಸೇರಿದೆ ಎಂದರು.

ಶಿವಮೊಗ್ಗ-ಶೃಂಗೇರಿ-ಮಂಗಳೂರು 332 ಕಿ.ಮೀ. ಉದ್ದದ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, 3,300 ಕೋಟಿ ರೂ. ವೆಚ್ಚದ ಕಾಮಗಾರಿ ಫೈನಲ್ ಸರ್ವೆ ಅನುಮೋದನೆಯಾಗಿದೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದರು.

ಮಂಗಳೂರಿನಲ್ಲಿ ಕೊಂಕಣ ರೈಲ್ವೆ, ಸೌತ್ ವೆಸ್ಟರ್ನ್ ಮತ್ತು ಸದರ್ನ್ ರೈಲ್ವೆಗಳು ಇವೆ. ಇದರಿಂದ ಸಮನ್ವಯಕ್ಕೂ ಸಮಸ್ಯೆಯಾಗುತ್ತದೆ. ಹಾಗಾಗಿ ಇವುಗಳನ್ನು ಆಡಳಿತಾತ್ಮಕವಾಗಿ ಒಂದುಗೂಡಿಸುವ ಪ್ರಕ್ರಿಯೆ ಮುಂದಿನ 3 ತಿಂಗಳಲ್ಲಿ ಒಂದು ಹಂತಕ್ಕೆ ಬರಲಿದೆ. ರಾಜ್ಯದಲ್ಲಿ 52,000 ಕೋ.ರೂ. ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯದಲ್ಲಿ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ 32 ರೈಲುಗಳ ಸಂಚಾರವನ್ನು ಖಾಯಂಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪಾಂಡೇಶ್ವರ ರೈಲ್ವೆ ಕ್ರಾಸಿಂಗ್‌ನಿಂದ ರಸ್ತೆ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಚಿವರ ಗಮನಕ್ಕೆ ತಂದರು. ಇಲ್ಲಿ ಅಗತ್ಯವಿರುವ ಭೂಸ್ವಾಧೀನ ಸಹಿತ ಕಾಮಗಾರಿಯನ್ನು ನಡೆಸಲು ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು. ಇದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡಲಿದೆ. ರೈಲ್ವೆ ಇಲಾಖೆಯಿಂದ ಮಂಗಳೂರಿನಲ್ಲಿ ಭೂ ಸ್ವಾಧೀನ ಸಹಿತ ಏನೇನಾಗಬೇಕೆಂದು ಮಾಸ್ಟರ್ ಪ್ಲ್ಯಾನ್ ಮಾಡಿ. ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಡೋಣ. ಅನುದಾನ ನೀಡುತ್ತೇವೆ ಎಂದು ಸಚಿವರು ಹೇಳಿದರು.

ವಿಮಾನ ನಿಲ್ದಾಣದ ಪಕ್ಕದಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ನಡೆಯುತ್ತಿದೆ ಹಾಗೂ ಗೊಮ್ಮಟೇಶ್ವರ ರೈಲು ಸೆಂಟ್ರಲ್‌ಗೆ ಬರಬೇಕು ಎಂಬ ಬೇಡಿಕೆಯ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅವರು ಸಚಿವರ ಗಮನಕ್ಕೆ ತಂದರು.

ಅಧಿಕಾರಿಗಳಿಗೆ ಸಚಿವರ ಸೂಚನೆ

ಮುಂಬೈ-ಮಂಗಳೂರು ಮತ್ಸ್ಯಗಂಧ ರೈಲು ಜಂಕ್ಷನ್ ನಿಲ್ದಾಣದಲ್ಲಿಯೂ ನಿಲುಗಡೆ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಹಾಗೂ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲನ್ನು ಮೆಮು ರೈಲನ್ನಾಗಿ ಮಾಡಲು ಪ್ರಸ್ತಾವನೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೆಂಟ್ರಲ್‌ನ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್

ಮಂಗಳೂರು ಜಂಕ್ಷನ್ ನಿಲ್ದಾಣದ ಅಭಿವೃದ್ಧಿ 38 ಕೋ.ರೂ.ನಲ್ಲಿ ಆಗುತ್ತಿದೆ. ಮಂಗಳೂರು ಸೆಂಟ್ರಲ್‌ನ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಲಾಗುವುದು. 40 ಕೋ.ರೂ. ವೆಚ್ಚದಲ್ಲಿ ಮಂಗಳೂರು ಜಂಕ್ಷನ್ ಯಾರ್ಡ್ ನಿರ್ಮಾಣವಾಗಲಿದೆ. ಅಲ್ಲಿ ಹೆಚ್ಚುವರಿ ಗೂಡ್ಸ್ ಲೈನ್ ಬರಲಿದೆ ಎಂದು ಸಚಿವರು ತಿಳಿಸಿದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ನಿತಿನ್ ಕುಮಾರ್, ಕವಿತಾ ಸನಿಲ್, ಪೂಜಾ ಪೈ ಮೊದಲಾದವರು ಉಪಸ್ಥಿತರಿದ್ದರು. ರೈಲು ಬಳಕೆದಾರರ ಸಂಘಗಳ ಪ್ರಮುಖರಾದ ಹನುಮಂತ ಕಾಮತ್, ಜಿ.ಕೆ. ಭಟ್ ಅವರು ಸಚಿವರಿಗೆ ಮನವಿಗಳನ್ನು ಸಲ್ಲಿಸಿದರು. ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾಸನ-ಮಂಗಳೂರು ದ್ವಿಪಥ 247 ಕಿ.ಮೀ ಅಂದಾಜು 8,300 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಘಾಟಿಯಲ್ಲಿ ಎಫ್‌ಎಲ್‌ಎಸ್ ಆಗಿದೆ. ಡಿಪಿಆರ್ ಪರಿಶೀಲನೆಯಲ್ಲಿದೆ. ಶೋರನೂರು-ಮಂಗಳೂರು 306 ಕಿ.ಮೀ ನಲ್ಲಿ 160 ಕಿ.ಮೀ ವೇಗದಲ್ಲಿ ಸಂಚರಿಸಲು ಸರ್ವೆ ನಡೆದಿದೆ. ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಲಾಗುವುದು.

— ವಿ. ಸೋಮಣ್ಣ, ರೈಲ್ವೇ ರಾಜ್ಯ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net