ಮಂಗಳೂರು-ಬೆಂಗಳೂರು ಇನ್ನೊಂದೇ ರೈಲು

Trainig
Published on

ಮಂಗಳೂರು: ವಾರದಲ್ಲಿ ನಾಲ್ಕು ದಿನ ಕುಣಿಗಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ಸ್ಪೆಷಲ್ ಎಕ್ಸ್‌ಪ್ರೆಸ್ (06515/ 16) ರೈಲನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.

ಪ್ರಯಾಣಿಕರ ತೀವ್ರ ಕೊರತೆಯಿಂದ ಈ ಕ್ರಮ ಕೈಗೊಂಡಿದ್ದು, ಹೊಸ ಅಧಿಸೂಚನೆ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಅ.7ರಿಂದ ಮತ್ತು ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಅ.8ರಿಂದ ಜಾರಿಯಾಗಲಿದೆ.

ಈಗ ತಾತ್ಕಾಲಿಕವಾಗಿ ರದ್ದುಗೊಂಡಿರುವುದು ಕುಣಿಗಲ್ ಮಾರ್ಗದ ರೈಲು ಮಾತ್ರ. ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಬೆಂಗಳೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ಸ್ಪೆಷಲ್ ಎಕ್ಸ್‌ಪ್ರೆಸ್ (06517/18) ಸಂಚಾರ ಯಥಾಸ್ಥಿತಿಯಲ್ಲಿದೆ. ಅದೇ ರೀತಿ, ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿರುವ ಬೆಂಗಳೂರು-ಮಂಗಳೂರು-ಕಾರವಾರ-ಬೆಂಗಳೂರು ರೈಲು ಸಂಚಾರವೂ ಯಥಾಸ್ಥಿತಿಯಲ್ಲಿದೆ. ಈ ರೈಲಿಗೆ ಮಂಗಳೂರಿನಲ್ಲಿ ನಿಲುಗಡೆ ಇಲ್ಲ. ಬಿ.ಸಿ.ರೋಡ್ ಮತ್ತು ಸುರತ್ಕಲ್‌ನಲ್ಲಿ ಮಾತ್ರ ನಿಲುಗಡೆ ಇದೆ.

ವೇಳಾಪಟ್ಟಿ ಬದಲು: ರೈಲು ಸಂ.06515/ 16 ರದ್ದುಗೊಂಡ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುವ ಇನ್ನೊಂದು ರೈಲಿನ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ರೈಲು ಸಂ.06517 ಬೆಂಗಳೂರು-ಮಂಗಳೂರು ರೈಲು ಭಾನುವಾರ, ಸೋಮವಾರ, ಮಂಗಳವಾರದ ಬದಲು ಅ.7ರಿಂದ ಬುಧವಾರ, ಶುಕ್ರವಾರ, ಭಾನುವಾರಗಳಂದು ಸಂಚರಿಸಲಿದೆ.

ರೈಲು ಸಂ.06518 ಮಂಗಳೂರು-ಬೆಂಗಳೂರು ರೈಲು ಗುರುವಾರ, ಶುಕ್ರವಾರ, ಶನಿವಾರದ ಬದಲು ಅ.8ರಿಂದ ಗುರುವಾರ, ಶನಿವಾರ, ಸೋಮವಾರಗಳಂದು ಸಂಚರಿಸಲಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು- ಕಾರವಾರ ಮತ್ತು ಮಂಗಳೂರು- ಬೆಂಗಳೂರು ಎರಡು ವಿಶೇಷ ರೈಲುಗಳು ಬೆಂಗಳೂರಿನಿಂದ ಹೊರಡುವಾಗ ಶುಕ್ರವಾರ, ಶನಿವಾರ ಮತ್ತು ಕರಾವಳಿಯಿಂದ ಹೊರಡುವಾಗ ಭಾನುವಾರ ಮಾತ್ರ ತುಂಬುತ್ತವೆ. ಇತರ ದಿನಗಳಲ್ಲಿ ನಿಧಾನವಾಗಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿತ್ತು. ಪ್ರಸ್ತುತ ಪ್ರತಿದಿನ ಸರಾಸರಿ 100 ಪ್ರಯಾಣಿಕರು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಈ ರೈಲು ಏರುತ್ತಿದ್ದರು. ಕೋವಿಡ್ ಸೋಂಕು ಏರುಗತಿ ಇರುವ ಈ ಅವಧಿಯಲ್ಲೂ ರೈಲು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ರೈಲ್ವೆ ಯಾತ್ರಿ ಸಂಘದ ಮುಖಂಡರ ವಿಶ್ಲೇಷಣೆ.

ಕಡಿಮೆಯಾದ ಒಲವು: ಅನ್‌ಲಾಕ್- 5 ಜಾರಿಯಾದರೂ ಸಾರ್ವಜನಿಕ ಸಾರಿಗೆ ಸೇವೆಗೆ ಜನರು ಇನ್ನೂ ಹಿಂಜರಿಯುತ್ತಿದ್ದಾರೆ. ಬಸ್ ಸಂಚಾರ ವ್ಯವಸ್ಥೆಯನ್ನು ಜನರು ನಿಧಾನವಾಗಿ ಬಳಸಲು ಆರಂಭಿಸಿದ್ದರೂ, ರೈಲುಗಳು, ಅದರಲ್ಲೂ ರಾಜ್ಯದೊಳಗೆ ಸಂಚರಿಸುವ ರೈಲುಗಳಿಗೆ ಪ್ರಯಾಣಿಕರಿಂದ ನೀರಸ ಸ್ಪಂದನೆ ವ್ಯಕ್ತವಾಗಿದೆ. ರೈಲು ಪ್ರಯಾಣಕ್ಕೆ ಆನ್‌ಲೈನ್ ಬುಕಿಂಗ್ ಕಡ್ಡಾಯ ಮತ್ತು ಕಾರವಾರ- ಮಂಗಳೂರು- ಬೆಂಗಳೂರು ನಡುವೆ ಸಾಕಷ್ಟು ಬಸ್‌ಗಳು ಲಭ್ಯವಿರುವುದು ರೈಲು ಸೇವೆ ಬಳಸಲು ಜನರು ಹಿಂಜರಿಯುತ್ತಿರಲು ಮುಖ್ಯ ಕಾರಣ. ಶಾಲಾ- ಕಾಲೇಜುಗಳು ಬಂದ್ ಆಗಿರುವುದು, ಹಿರಿಯರು, ಕುಟುಂಬ ಜತೆಯಾಗಿ ಪ್ರಯಾಣ ಕಡಿಮೆಯಾಗಿರುವುದು ಇತರ ಕಾರಣಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net