ಬೆಳ್ತಂಗಡಿ ಜಾಗದ ತಕರಾರಿನಲ್ಲಿ ಕೊಲೆ ಆರೋಪಿ ಖುಲಾಸೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಬೆಳ್ತಂಗಡಿಯ ರೇಖ್ಯಾ ಗ್ರಾಮದ ಜಾಗದಲ್ಲಿನ ತಕರಾರು ವಿಚಾರಕ್ಕಾಗಿ ತನ್ನ ಸಹೋದರನ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಯಚಂದ್ರ ಗೌಡ ಎಂಬಾತನನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿದೆ.

ಪ್ರಕರಣ ವಿವರ: ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದೇವಸ ಎಂಬಲ್ಲಿ ಕೆಂಚಪ್ಪ ಗೌಡ ಮತ್ತು ಆತನ ಸಹೋದರ ಜಯಚಂದ್ರನ ಕುಟುಂಬ ವಾಸವಾಗಿತ್ತು. ಈ ಎರಡು ಕುಟುಂಬಗಳ ನಡುವೆ ಸುಮಾರು ಹತ್ತು ವರ್ಷಗಳಿಂದ ಜಮೀನಿನ ವಿಷಯದಲ್ಲಿ ವಿವಾದ ಉಂಟಾಗಿತ್ತು. ಇದು ಹಲವಾರು ಬಾರಿ ಕುಟುಂಬಸ್ಥರ ನಡುವೆ ತೀರ್ಮಾನಗಳು ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹಲವಾರು ಬಾರಿ ಪೋಲಿಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದವು.

2022ರ ಜ.13ರಂದು ಕೆಂಚಪ್ಪ ಗೌಡರವರ ಮಗ ಶಾಂತಪ್ಪ ಗೌಡ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕೆಲಸದ ನಿಮಿತ್ತ ಹೊರಟು ಹೋಗುತ್ತಿರುವಾಗ ಆರೋಪಿ ಜಯಚಂದ್ರ ತನ್ನ ಕೆಲಸದ ಆಳುಗಳ ಮುಖಾಂತರ ರಸ್ತೆಯ ಬದಿಯಲ್ಲಿ ಬಲ್ಲೆ ತೆಗೆಸುತ್ತಿದ್ದನು. ಇದನ್ನು ನೋಡಿದ ಶಾಂತಪ್ಪ ಗೌಡನು ಬಲ್ಲೆ ಯಾಕೆ ತೆಗೆಯುತ್ತಿದ್ದೀಯಾ ಎಂದು ಕೇಳಿದಾಗ ಜಯಚಂದ್ರನು ಶಾಂತಪ್ಪ ಗೌಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಶಾಂತಪ್ಪ ಗೌಡನ ಕುತ್ತಿಗೆಗೆ, ಕೆನ್ನೆಗೆ ಇರಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಶಾಂತಪ್ಪ ಗೌಡ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದರು.

ಈ ಘಟನೆಯನ್ನು ಶಾಂತಪ್ಪ ಗೌಡನ ಅಕ್ಕ ಮೀನಾಕ್ಷಿ, ಆತನ ತಂದೆ ಕೆಂಚಪ್ಪ ಗೌಡ, ತಾಯಿ ಕುಂಜ್ಞಮ್ಮ ಹಾಗೂ ಅವರ ಮನೆಯ ಹತ್ತಿರ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಜೋಸ್ೆ ಕಣ್ಣಾರೆ ಕಂಡಿದ್ದರು.

ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಶಿವಕುಮರ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ಪ್ರಕರಣ ಹೆಚ್ಚು ತೀವ್ರ ಸ್ವರೂಪದ್ದಾಗಿದ್ದರಿಂದ ಜಿಲ್ಲಾ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಣೆ ಮಾಡಿತ್ತು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರು ಹಾಗೂ ಇತರ ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆಗೆ ಒಳಪಡಿಸಿದ್ದು, ಪ್ರತ್ಯಕ್ಷ ಸಾಕ್ಷಿದಾರರೆಲ್ಲರೂ ಪ್ರಕರಣಕ್ಕೆ ಪೂರಕವಾಗಿ ಸಾಕ್ಷಿ ನುಡಿದಿದ್ದರು. ಆದರೆ ಪ್ರಕರಣದಲ್ಲಿ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಲವಾಗಿದೆ. ಲಭ್ಯವಿದ್ದ ದಾಖಲೆಗಳನ್ನು ಪೋಲಿಸರು ತನಿಖೆ ಸಂದರ್ಭದಲ್ಲಿ ಪಡೆದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ರವೀಂದ್ರ ಎಂ.ಜೋಷಿ ಅವರು ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿ ಪರವಾಗಿ ಮಂಗಳೂರಿನ ವಕೀಲ ವೇಣು ಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ಆವರು ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net