ಬರ್ಕೆ ಫ್ರೆಂಡ್ಸ್ ವತಿಯಿಂದ ಕಲಾವಿದರಿಗೆ ಸನ್ಮಾನ

mng-15 Oct Barke Friends
Published on

ಮಂಗಳೂರು: ದಸರಾ ಪ್ರಯುಕ್ತ ಆಯೋಜಿಸಲಾದ ಬರ್ಕೆ ಫ್ರೆಂಡ್ಸ್ ಇದರ 32ನೇ ವರ್ಷದ ಹುಲಿ ವೇಷದ ಊದು ಪೂಜೆಯ ಸಂದರ್ಭದಲ್ಲಿ 5 ಮಂದಿ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.


ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಉದಯೋನ್ಮುಖ ಸ್ತ್ರೀ ವೇಷಧಾರಿಗಳಾದ ರಾಜೇಶ್ ನಿಟ್ಟೆ, ರಕ್ಷಿತ್ ಶೆಟ್ಟಿ ಪಡ್ರೆ, ಯುವ ಭಾಗವತ ಧೀರಜ್ ರೈ ಸಂಪಾಜೆ ಹಾಗೂ ಹಿರಿಯ ಹುಲಿ ವೇಷಧಾರಿ ಗಂಗಾಧರ್ ದೇವಾಡಿಗ ಕದ್ರಿ (ಪಿಲಿ ಅಣ್ಣು) ಅವರನ್ನು ಮಣ್ಣಗುಡ್ಡೆ ಶಾಲೆಯಲ್ಲಿ ಸನ್ಮಾನಿಸಲಾಯಿತು.


ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಂಗಭೂಮಿ ಕಲಾವಿದ ಡಾ.ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ಕಳೆದ 32 ವರ್ಷಗಳಿಂದ ನಿರಂತರವಾಗಿ ಹುಲಿ ವೇಷ ಹಾಗೂ ವೈವಿಧ್ಯಮಯ ಟ್ಯಾಬ್ಲೋಗಳ ಮೂಲಕ ಮಂಗಳೂರು ದಸರಾ ಮೆರವಣಿಗೆಗೆ ವಿಶೇಷ ಶೋಭೆ ನೀಡುವ ಬರ್ಕೆ ಫ್ರೆಂಡ್ಸ್ ಅವರ ಕೊಡುಗೆ ಶ್ಲಾಘನೀಯ ಎಂದರು.


ಸನ್ಮಾನಿತರ ಪರವಾಗಿ ಮಾತನಾಡಿದ ಸಂಜಯ ಕುಮಾರ್ ಶೆಟ್ಟಿ ಅವರು, ವಿವಿಧ ಕ್ಷೇತ್ರಗಳ ಕಲಾವಿದರನ್ನು ನಿರಂತರವಾಗಿ ಗೌರವಿಸುವ ಮನೋಭಾವ ಹೊಂದಿರುವ ಬರ್ಕೆ ಫ್ರೆಂಡ್ಸ್ ಇದರ ಸದಸ್ಯರು ಅಭಿನಂದನಾರ್ಹರು ಎಂದರು.


ಶರ್ಮಿಳಾ ಡಿ.ಕಾಪಿಕಾಡ್, ಉದ್ಯಮಿಗಳಾದ ಆನಂದರಾಜ್ ಶೆಟ್ಟಿ ದುಬೈ, ಗಿರೀಶ್ ದುಬೈ, ದೀಪಕ್ ಬೆಂಗಳೂರು, ಮನುಕುಮಾರ್, ಮಾಧವ ಕಾಮತ್, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್, ಮಣ್ಣಗುಡ್ಡೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಬರ್ಕೆ ಫ್ರೆಂಡ್ಸ್ ಇದರ ಸ್ಥಾಪಕ ಅಧ್ಯಕ್ಷ ಯಜ್ಞೇಶ್ವರ ಬರ್ಕೆ, ಗೌರವ ಅಧ್ಯಕ್ಷ ಸುಚೀಂದ್ರ ಅಮೀನ್ ಬರ್ಕೆ, ಅಧ್ಯಕ್ಷ ಕಿಶನ್ ಬರ್ಕೆ ಮತ್ತಿತರರು ಉಪಸ್ಥಿತರಿದ್ದರು. ಬರ್ಕೆ ಫ್ರೆಂಡ್ಸ್‌ನ ಕಾರ್ತಿಕ್ ಶೆಟ್ಟಿ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net