

ಮಂಗಳೂರು : ತನ್ನ ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು. ಸ್ವಾಭಿಮಾನಿಯಾಗಿದ್ದ ಅವರ ಕುಟುಂಬದ ಜೊತೆಗೆ ಅಭಿಮಾನಿಗಳು ನಿಲ್ಲುವ ಅವಶ್ಯಕತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಡಾ.ಪ್ರಭಾಕರ ಜೋಷಿ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷ ಧ್ರವ ಪಟ್ಲ ಫೌಂಡೇಶನ್ ಟ್ರಸ್ಟ್, ತುಳು ನಾಟಕ ಕಲಾವಿದರ ಒಕ್ಕೂಟ ಶನಿವಾರ ತುಳು ಅಕಾಡೆಮಿಯ ತುಳು ಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಜಯರಾಮ ಆಚಾರ್ಯ ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಪಾಂಡಿತ್ಯಪೂರ್ಣ ಕಲಾವಿದರಾಗಿದ್ದರು. ಹಿರಿಯ ಪರಂಪರೆಯ ಶ್ರೇಷ್ಠ ಹಾಸ್ಯ ಕಲಾವಿದರ ಸಾಲಿನಲ್ಲಿ ಆಚಾರ್ಯರಿಗೆ ಸ್ಥಾನವಿತ್ತು ಎಂದು ಜೋಷಿ ಬಣ್ಣಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಅತ್ಯಂತ ಸಜ್ಜನ ಹಾಗೂ ಸ್ವಾಭಿಮಾನಿ ಕಲಾವಿದ ಜಯರಾಮ ಆಚಾರ್ಯ ಅವರ ಹೆಸರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿಗೆ ಸೇರ್ಪಡೆಯಾಗಿತ್ತು ಎಂದು ಉಲ್ಲೇಖಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ಜಯರಾಮ ಆಚಾರ್ಯ ಅವರ ಕಲಾ ಶಿಸ್ತು ಹಾಗೂ ಸ್ವಾಭಿಮಾನದ ಬದುಕನ್ನು ಕಲಾರಂಗ ಸದಾ ಸ್ಮರಿಸಲಿದೆ ಎಂದರು.
ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ನಟ ಅರವಿಂದ ಬೋಳಾರ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಪುರುಷೋತ್ತಮ ಭಂಡಾರಿ, ತುಳು ನಾಟಕ ಕಲಾವಿರ ಒಕ್ಕೂಟದ ಉಪಾಧ್ಯಕ್ಷ ಪ್ರದೀಪ್ ಆಳ್ವಾ, ಹಿರಿಯ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ಜಯರಾಮ ಆಚಾರ್ಯ ಅವರ ಸಹೋದರ ನಾರಾಯಣ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಅವರು ಜಯರಾಮ ಆಚಾರ್ಯರ ಬಗ್ಗೆ ಗುಣಗಾಣಗೈದರು.
ಜಯರಾಮ ಆಚಾರ್ಯರ ಪುತ್ರ ವರಣ್ ಆಚಾರ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ , ಯಕ್ಷ ಧ್ರುವ ಪಟ್ಲ ಪೌಂಢೇಶನ್ ಉಪಾಧ್ಯಕ್ಷ ಜಯಶೀಲ ಅಡ್ಯಂತಾಯ , ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್, ನಟ ಲಕ್ಷ್ಮಣ್ ಕುಮಾರ್ ಮಲ್ಲೂರು ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ, ತುಳು ಅಕಾಡೆಮಿ ಸದಸ್ಯರಾದ, ಸಂತೋಷ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ರೋಹಿತ್ ಉಳ್ಳಾಲ್, ಯಕ್ಷಗಾನ ಅಕಾಡೆಮಿ ಸದಸ್ಯರಾದ ಮೋಹನ್ ಕೊಪ್ಪಳ, ಜಿ.ವಿ.ಎಸ್.ಉಳ್ಳಾಲ್, ತುಳು ಅಕಾಡೆಮಿ ಮಾಜಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ, ಬೆನೆಟ್ ಅಮ್ಮನ್ನ ಮೊದಲಾದವರು ಉಪ್ಥಿತರಿದ್ದರು.
ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.