

ಪ್ರಕಾಶ್ ಮಂಜೇಶ್ವರ, ಮಂಗಳೂರು
ರಾಜ್ಯದಲ್ಲಿ ಅನ್‌ಲಾಕ್ ಮುನ್ಸೂಚನೆ ದೊರೆತ ಕೂಡಲೇ ಕರಾವಳಿ ಭಾಗದಿಂದ ಬೆಂಗಳೂರು ಕಡೆಗೆ ತೆರಳುವ ರೈಲುಗಳೆಲ್ಲ ವಾರದ ನಡುವಿನ ದಿನಗಳಲ್ಲೂ ಭರ್ತಿಯಾಗಲು ಆರಂಭಿಸಿವೆ.
ಬೆಂಗಳೂರಿನ ಹೊಟೇಲ್ ಉದ್ಯಮ, ಸ್ವರ್ಣಾಭರಣ, ಆಸ್ಪತ್ರೆ, ಸಾಫ್ಟ್‌ವೇರ್ ಕಂಪನಿ ಸಹಿತ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರದ ಭಾಗದ ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದಾರೆ. ಕರಾವಳಿಯ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಅವರ ಜತೆಗಿರುವ ಕುಟುಂಬ ಸದಸ್ಯರನ್ನು ಗಣನೆಗೆ ತೆಗೆದುಕೊಂಡರೆ ಕರಾವಳಿಯ 10 ಲಕ್ಷ ಜನರು ಬೆಂಗಳೂರಿನಲ್ಲಿ ಇರಬಹುದು.
ರಾಜಧಾನಿಯಲ್ಲಿ ಕರೊನಾ ತೀವ್ರ ಸ್ವರೂಪದಲ್ಲಿ ವ್ಯಾಪಿಸಿ ರಾಜ್ಯದಲ್ಲೇ ಲಾಕ್‌ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಈ ಜನರು ಅನಿವಾರ್ಯವಾಗಿ ತಮ್ಮ ಊರುಗಳಿಗೆ ವಾಪಸಾಗಿದ್ದರು. ಹಾಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ರೈಲು ಮತ್ತು ವಿಮಾನದಲ್ಲಷ್ಟೇ ಪ್ರಯಾಣಿಸಲು ಅವಕಾಶವಿದೆ. ಕಳೆದ ವಾರದವರೆಗೂ ಖಾಲಿ ಓಡುತ್ತಿದ್ದ ಕರ್ನಾಟಕ ಮತ್ತು ಕೇರಳ ಕರಾವಳಿ ಹಾಗೂ ಬೆಂಗಳೂರು ಸಂಪರ್ಕಿಸುವ ರೈಲುಗಳು ಕೆಲವು ದಿನಗಳಿಂದ ಭರ್ತಿಯಾಗಿ ಸಂಚರಿಸುತ್ತಿದ್ದು, ಕಾಯುವವರ ಪಟ್ಟಿ (ವೈಟಿಂಗ್ ಲಿಸ್ಟ್)ನಲ್ಲಿ ಸಾಕಷ್ಟು ಹೆಸರುಗಳಿವೆ.
ರೈಲ್ವೆ ಟಿಕೆಟ್ ಬುಕಿಂಗ್ ಆನ್‌ಲೈನ್ ವ್ಯವಸ್ಥೆಯಲ್ಲಿ ಜೂ.13ರಂದು ಪ್ರಯಾಣಿಸಬೇಕಾಗಿದ್ದ ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್ (06585)ನ ಎಲ್ಲ ಸೀಟುಗಳ ಬುಕಿಂಗ್ ಮಧ್ಯಾಹ್ನ ಹೊತ್ತಿಗೆ ಪೂರ್ಣಗೊಂಡಿದ್ದು, ಒಟ್ಟು 312 ಮಂದಿ ಕಾಯುವವರ ಪಟ್ಟಿಯಲ್ಲಿದ್ದರು. ಕಳೆದ ಕೆಲವು ದಿನಗಳಿಂದ ಇದೇ ಪರಿಸ್ಥಿತಿ ಇದೆ.
ಫಸ್ಟ್ ಎಸಿ ಬುಕ್ ಮಾಡಿಕೊಂಡು ಪ್ರಯಾಣಿಸುವವರ ಸಂಖ್ಯೆ ಅಧಿಕವಿದೆ. ಕುಟುಂಬ ಸದಸ್ಯರು ಸುರಕ್ಷತೆ ದೃಷ್ಟಿಯಿಂದ ಇಡೀ ಕ್ಯಾಬಿನ್ ಬುಕ್ ಮಾಡಿಕೊಂಡು ಪ್ರಯಾಣಿಸುವವರು ಕೂಡ ಇದ್ದಾರೆ ಎನ್ನುತ್ತಾರೆ ಓರ್ವ ಅಧಿಕಾರಿ. ಪ್ರಸ್ತುತ ಮಂಗಳೂರು, ಕಾರವಾರ, ಕಣ್ಣೂರು ಕಡಯಿಂದ ಬೆಂಗಳೂರಿಗೆ ಒಟ್ಟು ನಾಲ್ಕು ರೈಲುಗಳು ಪ್ರಯಾಣಿಸುತ್ತಿವೆ.
ಕರಾವಳಿಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಎಲ್ಲ ರೈಲುಗಳು ಕೆಲವು ದಿನಗಳಿಂದ ಭರ್ತಿಯಾಗಿ ಸಂಚರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುರಕ್ಷಿತ ಅಂತರ ಕಾಪಾಡುವುದು ಸವಾಲು. ಹೆಚ್ಚುವರಿ ರೈಲುಗಳನ್ನು ಓಡಿಸುವ ಮೂಲಕ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಬಹುದು.
ಗೌತಮ್ ಶೆಟ್ಟಿ ರೈಲ್ವೆ ಹೋರಾಟಗಾರರು.