

ಕೇಂದ್ರದಲ್ಲಿ ಹೊಸ ಸರ್ಕಾರ ಸ್ಥಾಪನೆಯಾಗುವ ಹೊತ್ತಿಗೆ ಮಂಗಳೂರು ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವೆ ರೈಲು ಹಳಿ ದ್ವಿಗುಣಗೊಳಿಸುವ ಯೋಜನೆ ಮತ್ತೆ ಚರ್ಚೆಗೆ ಬಂದಿದೆ.
ಈ ಮಾರ್ಗ ಹಾದುಹೋಗುವ ಪಶ್ಚಿಮ ಘಟ್ಟದ ಸಾಲಿನಲ್ಲಿ ಹಳಿ ದ್ವಿಗುಣ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಪರಿಸರ ಸೂಕ್ಷ್ಮ ಹಾಗೂ ಅಪರೂಪದ ಜೀವ ವೈವಿಧ್ಯವನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ ಹಳಿ ದ್ವಿಗುಣ ಕಾಮಗಾರಿಗೆ ಅರಣ್ಯ ಇಲಾಖೆ ಶಿಫಾರಸು ಮಾಡುವುದು ಕಷ್ಟ. ಪ್ರಭಾವ ಬೀರಿ ಶಿಫಾರಸು ಮಾಡಿದರೂ, ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಯೋಜನೆ ಕೈಬಿಡುವ ಪ್ರಸಂಗ ಎದುರಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ಇಲಾಖೆ ತಜ್ಞರ ಅಭಿಪ್ರಾಯ.
ರೈಲು ಹಳಿ ದ್ವಿಗುಣದಿಂದ ಮಂಗಳೂರು-ಬೆಂಗಳೂರು ನಡುವೆ ಹೈಸ್ಪೀಡ್ ರೈಲುಗಳ ಓಡಾಟ ಕನಸು ನನಸಾಗಲಿದೆ. ಪೂರ್ವ ಕರಾವಳಿ (ಚೆನ್ನೈ) ಮತ್ತು ಪಶ್ಚಿಮ ಕರಾವಳಿ(ಮಂಗಳೂರು) ಸಮೀಪವಾಗಲಿದೆ. ರಸ್ತೆ ಮಾರ್ಗದ ಒತ್ತಡ ಕಡಿಮೆಯಾಗಲಿದೆ. ಪಶ್ಚಿಮ ಘಟ್ಟದ ದಾರಿಯಲ್ಲಿ ಪ್ರಸ್ತುತ ಗಂಟೆಗೆ 40 ಕಿ.ಮೀ.ವೇಗ ನಿಗದಿಪಡಿಸಲಾಗಿದ್ದು, ರೈಲುಗಳು ಸುರಕ್ಷತೆ ದೃಷ್ಟಿಯಿಂದ 30 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುತ್ತಿವೆ. ಪರ್ಯಾಯ ಮಾರ್ಗ ರೂಪಿಸಿದರೆ ಅನುಕೂಲ.
ಅನಿಲ್ ಹೆಗ್ಡೆ,
ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ