ಬೈಕಂಪಾಡಿ ಬಿಎಎಸ್‌ಎಪ್‌ ಪೈಪ್‌ಲೈನ್ ವಿರುದ್ದ ಪ್ರತಿಭಟನೆ

mng--12 Jan Baikampadi Protest
Published on

ಮಂಗಳೂರು: ಸುರತ್ಕಲ್ ಸಮೀಪದ ಬಾಳದಲ್ಲಿರುವ ಬಿಎಎಸ್‌ಎ್ ಕೆಮಿಕಲ್ ಕಂಪನಿಯು ತನ್ನ ಸ್ಥಾವರದ ನೀರನ್ನು ಸಮುದ್ರಕ್ಕೆ ಬಿಡಲು ಹೊಸ ಪೈಪ್‌ಲೈನ್ ಅಳವಡಿಕೆ ಭಾನುವಾರ ಆರಂಭಿಸಿದ್ದು ಇದರ ವಿರುದ್ದ ಬೈಕಂಪಾಡಿ ಮೊಗವೀರ ಮಹಾಸಭಾ ಹಾಗೂ ಅಂಗ ಸಂಸ್ಥೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಜನರಿಗೆ ಯಾವುದೇ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಿದ್ದರಿಂದ ಗ್ರಾಮಸ್ಥರು ಕಾಮಗಾರಿಗೆ ತಡೆ ಒಡ್ಡಿದರು. ಎರಡು ಜೆಸಿಬಿ ಹಾಗೂ ಕಾರ್ಮಿಕರು ಪೈಪ್ ಜೋಡಣೆಗೆ ಹಾಕಿದ್ದ ಟೆಂಟ್‌ಗಳನ್ನು ತೆರವುಗೊಳಿಸಿ ವಾಪಾಸ್ ಕಳಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಬೈಕಂಪಾಡಿ ಮೊಗವೀರ ಮಹಾಸಭಾ ಅಧ್ಯಕ್ಷರಾದ ವಸಂತ ಅಮೀನ್ ಅವರು, ಸಂಸ್ಥೆಯ ಸಮುದ್ರಕ್ಕೆ ಹರಿಯ ಬಿಡುವ ನೀರು ಕಲುಷಿತವಾಗಿದ್ದು ಮೀನುಗಾರಿಕೆಗೆ ಮಾರಕವಾಗಿದೆ. ಸಮುದ್ರದ ಜಲಚರಗಳ ಸಂತಾನೋತ್ಪತ್ತಿಗೂ, ವೈವಿಧ್ಯತೆಗೂ ಹಾನಿಯಾಗುತ್ತದೆ. ಬೈಕಂಪಾಡಿ ಮೊಗವೀರ ಮಹಾಸಭಾದ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರ ಅನುಮತಿಯಿಲ್ಲದೆ ಕಾಮಗಾರಿ ಮಾಡಬಾರದು. ಬಲವಂತವಾಗಿ ಕೆಲಸ ಮಾಡಲು ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಯಂಗ್‌ಸ್ಟರ್ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್ ಮಾತನಾಡಿ, ಈಗಾಗಲೇ ಸಮುದ್ರವನ್ನು ಕಲುಷಿತ ಮಾಡುತ್ತಿರುವ ಬಿಎಎಸ್‌ಎ್ ಸಂಸ್ಥೆಯು ಮತ್ತೊಂದು ಹೊಸ ಪೈಪ್‌ಲೈನ್ ಹಾಕಲು ಮುಂದಾಗಿದೆ. ಮೀನುಗಾರರು ಈಗಾಗಲೇ ಮತ್ಸೃ ಸಂಪತ್ತಿನ ಕೊರತೆಯನ್ನು ಎದುರಿಸುತ್ತಿರುವಾಗ ಮತ್ತೆ ಸಮುದ್ರವನ್ನು ಕಲುಷಿತ ಮಾಡಲು ಬಿಡುವುದಿಲ್ಲ ಎಂದರು.

ಬೈಕಂಪಾಡಿ ಮಹಾಸಭಾದ ಪ್ರಧಾ ಕಾರ್ಯದರ್ಶಿ ಕುಮಾರ್ ಮೆಂಡನ್ ಆಕ್ರೋಶ ವ್ಯಕ್ತ ಪಡಿಸಿ, ಯಾವುದೇ ಮಾಹಿತಿ ನೀಡದೆ ಹೊಸ ಪೈಪ್‌ಲೈನ್ ಕಾಮಗಾರಿ ಆರಂಭಿಸಿದ್ದು, ಗ್ರಾಮಸ್ಥರನ್ನು ಕತ್ತಲಲ್ಲಿಟ್ಟು ಕಾಮಗಾರಿ ನಡೆಸುವುದನ್ನು ವಿರೋಧಿಸುತ್ತೇವೆ. ಪರಿಸರ ಮಾಲಿನ್ಯ ಆಗುವುದರಿಂದ ನಾವು ವಾಸಿಸುವ ಈ ಪ್ರದೇಶದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಆತಂಕವಿದೆ ಎಂದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷರಾದ ಹರಿಶ್ಚಂದ್ರ ಕರ್ಕೇರ, ಜತೆ ಕಾರ್ಯದರ್ಶಿ ಯೋಗೀಶ್ ಅಮೀನ್,ಕೋಶಾಧಿಕಾರಿ ದೇವದಾಸ್ ಕರ್ಕೇರ,ಮೊಕ್ತೇಸರರಾದ ಯಾದವ ಗುರಿಕಾರ,ಸಂತೋಷ್ ಗುರಿಕಾರ, ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ವೆಂಕಟೇಶ್ ಪೂಜಾರಿ,ದಾಮೋದರ ಪೂಜಾರಿ,ದೇವದಾಸ ಪುತ್ರನ್,ಧನಪಾಲ್ ಸಾಲ್ಯಾನ್,ಉದಯ್ ಕುಮಾರ್,ಪ್ರದೀಪ್ ಕಾಂಚನ್,ಸಂಪತ್ ಕುಮಾರ್,ಲೋಕೇಶ್ ಸುವರ್ಣ,ಪುರುಷೋತ್ತಮ್ ಕರ್ಕೇರ,ಧನಪಾಲ್ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net