ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಆಗ್ರಹ

mng--1 SEP Asha sammelana
Published on

ಮಂಗಳೂರು: ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಎಲ್ಲಾ ಶಾಸನಬದ್ಧ ಹಕ್ಕುಗಳನ್ನು ನೀಡಬೇಕೆಂದು ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಆಗ್ರಹಿಸಿದರು.


ನಗರದ ಉರ್ವಸ್ಟೋರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಆಶಾ ಕಾರ್ಯಕರ್ತೆಯರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.


ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಆರೋಗ್ಯ ಸೇವೆಯನ್ನು ಮತ್ತು ಆರೋಗ್ಯದ ಆರಿವನ್ನು, ಸಾಮಾನ್ಯ ಜನಗಳಿಗೆ ನೀಡುತ್ತಾ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಇವರ ಸೇವೆಯನ್ನು ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ನಾಯಕರೆಂದು ಬಿರುದನ್ನು ನೀಡಿದೆ. ರಾಜ್ಯದಲ್ಲಿ ಕಳೆದ 15 ವಷರ್ಗಳಿಂದ ಶಿಶು ಮರಣ ತಾಯಿ ಮರಣ ಕಡಿಮೆಯಾಗಲು ಆರೋಗ್ಯ ಸೂಚಿ ಮಾಪಕಗಳು ಹೆಚ್ಚಿಸಲು ಇವರ ಸೇವೆ ಪ್ರಮುಖ. ಆದರೆ ಸರ್ಕಾರ ಪ್ರತಿಫಲ ನೀಡದೆ ಹೀನಾಯವಾಗಿ ನಡೆಸಿಕೊಳ್ಳುತ್ತದೆ. ಇದಕ್ಕೆ ಸಂಘಟಿತ ನಿರಂತರ ಒಗ್ಗಟ್ಟಿನ ಹೋರಾಟ ಒಂದೇ ಪರಿಹಾರ ಎಂದವರು ಹೇಳಿದರು.


ಸೆ.13 ಮತ್ತು 14ರಂದು ಕಲಬುರಗಿಯಲ್ಲಿ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನ ನಡೆಯಲಿದೆ. ರಾಜ್ಯದ 31 ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಈ ಸಮ್ಮೇಳನದಲ್ಲಿ ಭಾಗವಹಿಸಿ, ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು


ಈ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು.


ಜಿಲ್ಲಾ ಸಂಚಾಲಕರಾದ ಹರಿಣಿಯವರು ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ದುಡಿಯುವ ವಿಭಾಗದ ಜನತೆ ಅನ್ಯಾಯಗಳಿಗೆ ಒಳಗಾಗಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದ್ದು, ದುಡಿಯುವ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ ನಡೆಯಬೇಕು ಹೇಳಿದರು.


ಸಮ್ಮೇಳನದಲ್ಲಿ ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ಗೊತ್ತುವಳಿ ಮತ್ತು ಕಲ್ಕತ್ತಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಗೊತ್ತುವಳಿ ಮಂಡಿಸಲಾಯಿತು. ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸಿ ನಮ್ಮನ್ನಗಲಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ದಕ್ಷಿಣ ಕನ್ನಡ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿ ಶೋಭಾ ನಾಯ್ಕ, ಅಧ್ಯಕ್ಷೆ ಗಾಯತ್ರಿ ಶೆಟ್ಟಿ, ಕಾರ್ಯದರ್ಶಿ ತಿರುಮಲೇಶ್ವರಿ, ಜಿಲ್ಲಾ ಮುಖಂಡರಾಗಿ ಸರಸ್ವತಿ ಸುಳ್ಯ, ಪೂರ್ಣಿಮಾ ಮಂಗಳೂರು, ಅಮಿತಾ ಪುತ್ತೂರು, ಗುಲಾಬಿ ಬೆಳ್ತಂಗಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net