

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಅಂಬೇಡ್ಕರ್ ವೃತ್ತದ (ಜ್ಯೋತಿ-ಕೆ.ಎಂ.ಸಿ ಆಸ್ಪತ್ರೆ ಬಳಿ) ಮಧ್ಯಭಾಗದಲ್ಲಿ ಭಾರತದ ಪ್ರಜಾಪ್ರಭುತ್ವ ಪಿತಾಮಹ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣದ ಕಾಮಗಾರಿಗೆ ಸೆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಲಾನ್ಯಾಸ ನೆರವೇರಿಸುವರು.
ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ಅಂಬೇಡ್ಕರ್ ವೃತ್ತದ ಮಧ್ಯಭಾಗದಲ್ಲಿ ಸುಂದರವಾದ ವೃತ್ತ ಹಾಗೂ ಅದರ ನಡುವೆ ಅಂಬೇಡ್ಕರ್ ಪ್ರತಿಮೆ ಮತ್ತು ಈಗಾಗಲೇ ಹಿಂದೆ ನಿರ್ಧರಿಸಿರುವಂತೆ ರಸ್ತೆಯ ಪಕ್ಕದಲ್ಲಿ ಅಂಬೇಡ್ಕರ್ ಸ್ತೂಪವನ್ನು ನಿರ್ಮಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಟ್ರಾಫಿಕ್ ಸಿಗ್ನಲ್‌ಗಳು, ಬ್ಯಾರಿಕೇಡ್ ಸಹಿತ ಫುಟ್‌ಪಾತ್‌ಗಳು, ಪಾದಚಾರಿ ಕೋರಿಕೆಯ ಸಿಗ್ನಲ್ ವ್ಯವಸ್ಥೆ, ವ್ಯವಸ್ಥಿತ ಝೀಬ್ರಾ ಕ್ರಾಸಿಂಗ್, ಇತ್ಯಾದಿಗಳನ್ನು ನಿರ್ಮಾಣ ಮಾಡುವ ಮೂಲಕ ಸೈಕಲ್ ಸವಾರರ, ಪಾದಚಾರಿಗಳ ಸಂಪೂರ್ಣ ಸುರಕ್ಷೆ ಮತ್ತು ವೇಗ ನಿಯಂತ್ರಣದೊಂದಿಗೆ ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ನಿರ್ಧಾರ ಕೈಗೊಳ್ಳಲಾಯಿತು.
ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು ಮೇಯರ್ ಅವರ ಸೂಚನೆಯಂತೆ ಮಹಾನಗರಪಾಲಿಕೆಗೆ ಸಲ್ಲಿಸಿರುವ ನುರಿತ ಇಂಜಿನಿಯರ್/ವಾಸ್ತು ಶಿಲ್ಪಿಗಳ ತಂಡದಿಂದ ಸಿದ್ದಪಡಿಸಲಾದ ಮಾದರಿ ನಕ್ಷೆ ಮತ್ತು ವಿನ್ಯಾಸವನ್ನು ಸಭೆಯು ಪರಿಶೀಲಿಸಿ, ಈ ವಿನ್ಯಾಸದಂತೆ ವೃತ್ತ ನಿರ್ಮಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಉಪಮೇಯರ್ ಸುನೀತಾ, ಮ.ನ.ಪಾ ಆಯುಕ್ತ ಆನಂದ್ ಸಿ.ಎಲ್., ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಭರತ್ ಕುಮಾರ್, ಸದಸ್ಯರುಗಳಾದ ಮನೋಜ್ ಕುಮಾರ್, ಸಂಗೀತಾ ಆರ್. ನಾಯಕ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ ಮತ್ತು ಇತರ ಅಧಿಕಾರಿಗಳು ಹಾಗೂ ವಿವಿಧ ದಲಿತ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.