ಅಲೋಶಿಯಸ್ ವಿವಿಯಿಂದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸನ್ಮಾನ

mng--18 Dec Alocius
Published on

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್ ವತಿಯಿಂದ, ಹಳೇ ವಿದ್ಯಾರ್ಥಿ, ಪ್ರಸ್ತುತ ಶ್ರೇಷ್ಠ ಉದ್ಯಮಿಯಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ವಿವಿಯ ಎಲ್.ಎಫ್. ರಸ್ಕೀನಾ ಸಭಾಂಗಣದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟರು ಅಲೋಶಿಯಸ್ ಕಾಲೇಜಿನ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡು ಧನ್ಯತಾ ಭಾವವನ್ನು ತೆರೆದಿಟ್ಟರು. ತಮ್ಮ ಜೀವನದಲ್ಲಿ ಒಬ್ಬ ಉದ್ಯಮಿಯಾಗಿ ಅತೀ ಹೆಚ್ಚಿನ ಯಶಸ್ಸನ್ನು ಗಳಿಸುವಲ್ಲಿ ಕಾಲೇಜಿನ ಕೊಡುಗೆಯನ್ನು ಮತ್ತು ಶಿಕ್ಷಕರನ್ನು ಸ್ಮರಿಸಿಕೊಂಡರು. ತಮ್ಮ ಉದ್ಯಮ ಕ್ಷೇತ್ರದ ಸಾಧನೆಯನ್ನು ವಿವರಿಸುವುದರೊಂದಿಗೆ, ಯಾವುದೇ ಉದ್ಯಮವನ್ನು ಪ್ರಾರಂಭಿಸುವುದಿದ್ದರೂ ವಿಷಯದ ಬಗ್ಗೆ ಆಳವಾದ ಜ್ಞಾನವನ್ನುಗಳಿಸಿಕೊಂಡು ತನ್ಮೂಲಕ ಕಾರ್ಯಪ್ರವೃತ್ತರಾದರೆ ಯಶಸ್ಸು ಗಳಿಸಬಹುದೆಂದು ಸಲಹೆಯಿತ್ತರು. ಯುವ ವಿಜ್ಞಾನದ ವಿದ್ಯಾರ್ಥಿಗಳು ಜೀವನದಲ್ಲಿ ಸವಾಲುಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕೆಂದು ಸಲಹೆಯಿತ್ತರು.

ವಿವಿಯ ಸಹಕುಲಪತಿ ಡಾ. ಮೆಲ್ವಿನ್ ಡಿಕುನ್ಹಾ ಅಭಿನಂದನಾ ಭಾಷಣಗೈದರು. ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಶುಭ ಹಾರೈಸಿದರು.

ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ, ವಿವಿಯ ಕುಲಸಚಿವ ಡಾ. ರೊನಾಲ್ಡ್ ನಜರೆತ್ ಹಾಗೂ ಶಿಲ್ಪಾ ಡಿಸೋಜ, ಸಾಂಸ್ಥಿಕ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು.

ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕ, ಡಾ. ಈಶ್ವರ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಸಹನಾರವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net