

ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಎರಡು ದಿನಗಳ ಭೇಟಿಗೆ ಮಂಗಳೂರು ಸಜ್ಜಾಗಿದ್ದು, ನಗರಾದ್ಯಂತ ಭದ್ರತಾ ಸಿಬ್ಬಂದಿ ಸರ್ಪಗಾವಲು ಹಾಕಲಾಗಿದೆ.
ರಾಷ್ಟ್ರಪತಿಗಳು ಗುರುವಾರ ಸಂಜೆ ವಿಮಾನ ಮೂಲಕ ಆಗಮಿಸಲಿದ್ದು, ನಗರದ ಕದ್ರಿಯ ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಶೃಂಗೇರಿಗೆ ತೆರಳಿ, ಸಾಯಂಕಾಲ ಇಲ್ಲಿಗೆ ವಾಪಸ್ ಬಂದು ದೆಹಲಿಗೆ ನಿರ್ಗಮಿಸಲಿದ್ದಾರೆ. ರಾಷ್ಟ್ರಪತಿಯವರೊಂದಿಗೆ ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪುತ್ರಿ ಸ್ವಾತಿ ಕೋವಿಂದ ಕೂಡ ಆಗಮಿಸಲಿದ್ದಾರೆ.
ರಾಷ್ಟ್ರಪತಿ ವಾಸ್ತವ್ಯ ಹೂಡಲಿರುವ ಸರ್ಕಿಟ್ ಹೌಸ್ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಮಡಲಾಗಿದೆ. ರಾಷ್ಟ್ರಪತಿಗಳ ಭದ್ರತೆ ನೋಡಿಕೊಳ್ಳುವ ಎಸ್‌ಪಿಜಿ ಆಗಮಿಸಿದ್ದು, ಇಡೀ ಸರ್ಕಿಟ್ ಹೌಸ್‌ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ರಾಷ್ಟ್ರಪತಿಯವರ ಪ್ರಯಾಣ, ವಾಸ್ತವ್ಯ, ಆಹಾರ, ವಸತಿ ಹೀಗೆ ಪ್ರತಿಯೊಂದು ಭಾಗವನ್ನೂ ಎಸ್‌ಪಿಜಿಯೇ ನೋಡಿಕೊಳ್ಳುತ್ತದೆ.
ವಿಮಾನ ನಿಲ್ದಾಣದಿಂದ ಸರ್ಕಿಟ್ ಹೌಸ್‌ಗೆ ಬರುವಾಗಲೂ ದಾರಿಯುದ್ದಕ್ಕೂ ಇರುವ ಎಲ್ಲ ಹಂಪ್‌ಗಳನ್ನೂ ತೆರವು ಮಾಡಲಾಗುತ್ತದೆ. ಪ್ರಯಾಣದ ವೇಳೆ ಯಾವುದೇ ಅಡೆತಡೆ ಇರಬಾರದು, ಭದ್ರತೆಗೆ ಚ್ಯುತಿಯಾಗಬಾರದು ಎಂಬ ಉದ್ದೇಶದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ.
ಸರ್ಕಾರಿ ಅಧಿಕಾರಿಗಳು ಸೇರಿದಂತೆ ರಾಷ್ಟ್ರಪತಿಗಳ ಪ್ರವಾಸದ ಕರ್ತವ್ಯದಲ್ಲಿರುವ ಯಾವುದೇ ಸಿಬ್ಬಂದಿಗೂ ಕಡ್ಡಾಯವಾಗಿ ತಪಾಸಣೆ, ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹಲವು ಸುತ್ತುಗಳ ಸಭೆ ನಡೆಸಿದ್ದಾರೆ. ಬುಧವಾರವೂ ಸರ್ಕಿಟ್ ಹೌಸ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಸ್ವಚ್ಛತೆ, ಊಟೋಪಚಾರ ಇತ್ಯಾದಿಗಳ ಕುರಿತು ಕೊನೆಯ ಹಂತದ ಪರಿಶೀಲನೆ ಕೈಗೊಂಡರು.
ಈ ವೇಳೆ ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ ಅಧಿಕಾರಿಗಳಿಗೆ ಬೇಕಾದ ಸಲಹೆ ಸೂಚನೆಗಳನ್ನೂ ನೀಡಿದರು.
ಮಾಕ್ ಡ್ರಿಲ್: ಮಂಗಳೂರು ವಿಮಾನ ನಿಲ್ದಾಣದಿಂದ ಸರ್ಕಿಟ್ ಹೌಸ್ ವರೆಗೆ ರಾಷ್ಟ್ರಪತಿಗಳನ್ನು ಕರೆತರುವ ಬೆಂಗಾವಲು ವಾಹನಗಳ ಸಂಚಾರದ ಅಭ್ಯಾಸವನ್ನೂ ಇದೇ ವೇಳೆ ಪೊಲೀಸರು ಕೈಗೊಂಡರು.
ಸ್ವಾಗತಕ್ಕೆ ಯಾರೆಲ್ಲ?: ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ಹಾಗೂ ದ.ಕ ಜಿಲ್ಲೆಯ ಪರವಾಗಿ ರಾಷ್ಟ್ರಪತಿಗಳನ್ನು ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋತ್, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ವಾಗತಿಸಲಿದ್ದಾರೆ.
ಪ್ರವಾಸ ವಿವರ: ಮೈಸೂರಿನಿಂದ ಅ.7ರಂದು ಸಂಜೆ 5.25ಕ್ಕೆ ವಿಮಾನದಲ್ಲಿ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 6.15ಕ್ಕೆ ತಲುಪುವರು. ಅಲ್ಲಿಂದ ಸರ್ಕೀಟ್ ಹೌಸ್‌ಗೆ ಆಗಮಿಸಿ ವಾಸ್ತವ್ಯ. 8ರಂದು ಬೆಳಗ್ಗೆ ಉಪಾಹಾರ ಮುಗಿಸಿ ಬೆಳಗ್ಗೆ 10.30ಕ್ಕೆ ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ, ಅಲ್ಲಿಂದ ಹೆಲಿಕಾಪ್ಟರಿನಲ್ಲಿ 10.55ಕ್ಕೆ ಶೃಂಗೇರಿ ಹೆಲಿಪ್ಯಾಡ್‌ಗೆ ಪ್ರಯಾಣ. ಶೃಂಗೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆ 4.20ಕ್ಕೆ ಹೊರಟು ಮಂಗಳೂರಿಗೆ 4.55ಕ್ಕೆ ತಲುಪುವರು. ಮಂಗಳೂರಿನಿಂದ ದೆಹಲಿಗೆ ಸಂಜೆ 5.10ಕ್ಕೆ ತೆರಳಲಿದ್ದಾರೆ.
ಹಿಂದಿ ದೈನಿಕ ಅಲಭ್ಯ!: ರಾಷ್ಟ್ರಪತಿಗಳಿಗೆ ಹಿಂದಿ ದೈನಿಕ ಒದಗಿಸಲು ಜಿಲ್ಲಾಡಳಿತ ಪರದಾಡುವಂತಾಗಿದೆ. ರಾಷ್ಟ್ರಪತಿ ಹಾಗೂ ಅವರ ಜತೆ ಬರುವ ಅಧಿಕಾರಿಗಳಿಗಾಗಿ ಹಿಂದಿ ಭಾಷೆಯ ದೈನಿಕ ಸಹಿತ ಎಲ್ಲ ದಿನಪತ್ರಿಕೆಗಳ ತಲಾ 25 ಪ್ರತಿ ಒದಗಿಸುವಂತೆ ಸೂಚನೆ ಇದೆ. ಮಂಗಳೂರಿಗೆ ಪ್ರತಿದಿನ ಹಿಂದಿ ದೈನಿಕವೊಂದರ 75 ಪ್ರತಿ ಬರುತ್ತಿತ್ತು. ಆದರೆ ಲಾಕ್‌ಡೌನ್ ಬಳಿಕ ಹಿಂದಿ ದೈನಿಕ ಪೂರೈಕೆಯಾಗುತ್ತಿಲ್ಲ.
ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಬುಧವಾರ ನಗರದ ವಿವಿಧ ಪತ್ರಿಕಾ ಏಜೆಂಟ್‌ಗಳನ್ನು ಸಂಪರ್ಕಿಸಿ ಹಿಂದಿ ದೈನಿಕಕ್ಕಾಗಿ ವಿಚಾರಿಸಿದ್ದಾರೆ. ಮಂಗಳೂರಿನ ಏಜೆಂಟ್ ಒಬ್ಬರು ಹುಬ್ಬಳ್ಳಿ ಹಾಗೂ ಹೈದರಾಬಾದ್‌ನ ಏಜೆಂಟ್‌ಗಳನ್ನು ಸಂಪರ್ಕಿಸಿ ಹಿಂದಿ ದೈನಿಕ ಪೂರೈಸಲು ವಿನಂತಿಸಿದ್ದಾರೆ ಎನ್ನುವ ಮಾಹಿತಿ ಇದೆ.
ನೀರ್‌ದೋಸೆ, ಅಂಜಲ್ ಫ್ರೈ, ಚಿಕನ್!: ರಾಷ್ಟ್ರಪತಿಯವರಿಗೆ ಸೂಕ್ತ ಊಟೋಪಚಾರ ನೀಡುವುದಕ್ಕಾಗಿ ರಾಷ್ಟ್ರಪತಿ ಭವನದ ಪಾಕಶಾಸ್ತ್ರಜ್ಞರೇ ಆಗಮಿಸಲಿದ್ದಾರೆ.
ಓಷನ್ ಪರ್ಲ್ ಹೋಟೆಲ್‌ನವರು ಊಟೋಪಚಾರ ಪೂರೈಕೆ ಮಾಡಲಿದ್ದು, ರಾಷ್ಟ್ರಪತಿಗಳ ಪಾಕಶಾಸ್ತ್ರಜ್ಞರು ತಿಂಡಿ, ಊಟ ಸಿದ್ಧಪಡಿಸುವರು. ಓಷನ್ ಪರ್ಲ್ ಸಿಬ್ಬಂದಿ ಅಗತ್ಯ ಸಹಕಾರ ನೀಡುವರು. ರಾಷ್ಟ್ರಪತಿಗಳ ಕುಟುಂಬಕ್ಕೆ ಮಾತ್ರ ಓಷನ್ ಪರ್ಲ್‌ನ ಪಾಕಶಾಸ್ತ್ರಜ್ಞರೇ ಊಟೋಪಚಾರ ನೀಡಲಿದ್ದಾರೆ.
7ರ ರಾತ್ರಿ ರಾಷ್ಟ್ರಪತಿಗಳ ಭೋಜನಕ್ಕೆ ಗ್ರೀನ್ ಸಲಾಡ್ ಪರ್ವಾಲ್ ಸಬ್ಜಿ, ಕರೇಲಾ ಕಾ ಭುಜಿಯಾ, ಮೂಂಗ್ ದಾಲ್ ಚಿಲ್ಕ, ಮೂಸರ್ ದಾಲ್ ಹಾಗೂ ಮೂಂಗ್ ದಾಲ್ ಮತ್ತು ಚಪಾತಿ, ಖಿಚಡಿ ತಯಾರಿಸಲಾಗುವುದು. 8ರ ಬೆಳಗ್ಗೆ ಉಪಾಹಾರಕ್ಕೆ ಪಪ್ಪಾಯಿ ಹಣ್ಣು, ಕಡಲೆ ಮೊಳಕೆ ಫ್ರೆಶ್ ಪನೀರ್, ದೂದ್‌ವಾಲ ಧಲಿಯಾ, ಇಡ್ಲಿ, ಉತ್ತಪ್ಪಮ್, ಕೋಕೊನಟ್ ಚಟ್ನಿ, ಸಾಂಬಾರ್ ಸಿದ್ಧಪಡಿಸಲಾಗುವುದು.
ಇನ್ನು ರಾಷ್ಟ್ರಪತಿಯವರ ಪತ್ನಿ ಹಾಗೂ ಪುತ್ರಿಗಾಗಿ ಸ್ಥಳೀಯ ವಿಶೇಷ ಖಾದ್ಯಗಳಾದ ಅಂಜಲ್ ತವಾ ಫ್ರೈ, ಚಿಕನ್ ಗ್ರೀನ್ ಘೀರೋಸ್ಟ್ ನೀರ್ ದೋಸೆ, ರುಮಾಲಿ ರೋಟಿ, ಬೆಳಗ್ಗಿನ ಉಪಹಾರಕ್ಕಾಗಿ ಸ್ಥಳೀಯ ಆಹಾರವಾದ ಇಡ್ಲಿ ವಡಾ, ಮೂಡೆ-ದಾಲ್‌ತೋವೆ, ರಾಗಿಮಣ್ಣಿ ಇತ್ಯಾದಿಗಳ ಮೆನು ಸಿದ್ಧಗೊಂಡಿದೆ.