ಮಂಗಳೂರು ಅಂ.ರಾ. ವಿಮಾನ ನಿಲ್ದಾಣ ನಿಖರ ಅಪ್ರೋಚ್ ಲೈಟಿಂಗ್ ಕಾಮಗಾರಿಗೆ ಭೂಮಿಪೂಜೆ

mng--28 April Airport
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯ ಸುರಕ್ಷತೆಗಾಗಿ ಉನಿಲೆಯ ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿ ಪ್ರೆಸಿಷನ್ ಅಪ್ರೋಚ್ ಲೈಟಿಂಗ್ (ಪಿಎಎಲ್) ವರ್ಗ 1 ವ್ಯವಸ್ಥೆಯನ್ನು ಸ್ಥಾಪಿಸಲು ಭೂಮಿಪೂಜೆ ನಡೆಯಿತು.


ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸುರಕ್ಷತೆ ಹಾಗೂ ಭದ್ರತಾನಿಯಂತ್ರಕರ ಸುರಕ್ಷತಾ ಶಿಫಾರಸ್ಸುಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣವು ಈ ಯೋಜನೆ ಕೈಗೆತ್ತಿಕೊಂಡಿದೆ. ಈ ವ್ಯವಸ್ಥೆಯು 20 ತಿಂಗಳ ಅವಧಿಯಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಪಾಲ್‌ಕ್ಯಾಟ್ 1 ವ್ಯವಸ್ಥೆಯ ಅನುಕೂಲವೆಂದರೆ ಇದು ಪೈಲಟ್‌ಗಳಿಗೆ ರನ್ ವೇ 24 ನ ಉತ್ತಮ ಗೋಚರತೆಯನ್ನು ನೀಡುತ್ತದೆ. ಅವರ ಅಂತಿಮ ಲ್ಯಾಂಡಿಂಗ್ ವಿಧಾನದ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಪಾಲ್ ಕ್ಯಾಟ್ 1 ವ್ಯವಸ್ಥೆಯನ್ನು ರವ್‌ವೇ 24ರ ಹೊಸ್ತಿಲಿನಿಂದ 900 ಮೀಟರ್ ತನಕ ಸ್ಥಾಪಿಸಲಾಗುವುದು. ಏಕೆಂದರೆ ಶೇ.90ರಷ್ಟು ವಿಮಾನ ಲ್ಯಾಂಡಿಂಗ್ ಈಕೊನೆಯಲ್ಲಿ ನಡೆಯುತ್ತದೆ.


ಸುಮಾರು 180 ಕಂಬಗಳ ಮೇಲೆ ದೀಪಗಳನ್ನು ಅಳವಡಿಸಲಾಗುವುದು. ಈಯೋಜನೆಯು ರನ್ ವೇ ಸೆಂಟರ್ ಲೈನ್ ದೀಪಗಳನ್ನು ಅಳವಡಿಸುವ ಕೆಲಸಕ್ಕೆ ಪೂರಕವಾಗಿರುತ್ತದೆ. ಇದರ ಕೆಲಸ ಪೂರ್ಣಗೊಂಡಿದೆ. ನಾಗರಿಕ ವಿಮಾನಯಾನ ನಿರ್ದೇಶಕರಿಂದ ಅನುಮೋದನೆ ಪಡೆದ ನಂತರ ಕಾರ್ಯಾರಂಭ ಮಾಡಲಿದೆ. ಯೋಜನೆಯ ವಿಶಿಷ್ಟ ಅಂಶವೆಂದರೆ ಟಿ ಆಕಾರದ ರಚನೆಗೆ ಜೋಡಿಸಲಾದ ನಿಖರವಾದ ಅಪ್ರೋಚ್ ದೀಪಗಳನ್ನು ಜಾತಕ ರಚನೆಯ ಮೇಲೆ ಅಳವಡಿಸಲಾಗುವುದು. ಇದಕ್ಕೆ ಉದಾಹರಣೆಗಳು ಜಾಗತಿಕ ವಾಯುಯಾನ ಕ್ಷೇತ್ರದಲ್ಲಿ ಬಹಳ ಕಡಿಮೆ ಮತ್ತು ಅಪರೂಪ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net