ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ

FIR-2
Published on


ಮಂಗಳೂರು: ಇಲ್ಲಿನ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೂ.18ರಂದು ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಇಮೇಲ್ ಐಡಿಗಳಿಗೆ ಅಪರಿಚಿತರು, ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಫೋಟಗೊಳ್ಳಲಿದೆ ಎನ್ನುವ ಸಂದೇಶ ಕಳಿಸಿದ್ದಾರೆ.


ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಸೆಕ್ಯುರಿಟಿ ಅಧಿಕಾರಿ ಮೋನಿಷ್ ಅವರು ವಿಮಾನ ನಿಲ್ದಾಣದ ಒಳಗಡೆ ಮತ್ತು ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ತೊಂದರೆ ಇಲ್ಲವೆಂದು ಖಚಿತಪಡಿಸಿದ ಬಳಿಕ ಜೂ. 19ರಂದು ಸಂಜೆ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.


ಅಪರಿಚಿತನೋರ್ವ ವಿಮಾನ ನಿಲ್ದಾಣದ ಎರಡು ಇಮೇಲ್ ಐಡಿಗಳಿಗೆ ಬೆದರಿಕೆ ಸಂದೇಶ ಕಳಿಸಿದ್ದಾನೆ.
ವಿಮಾನ ನಿಲ್ದಾಣದ ಒಳಗಡೆ ಸ್ಫೋಟಕ ಸಾಮಗ್ರಿ ಅಡಗಿಸಿಟ್ಟಿದ್ದು, ಕೆಲವೇ ಕ್ಷಣದಲ್ಲಿ ಸ್ಫೋಟ ಆಗಲಿದೆ. ನೀವೆಲ್ಲ ಸಾಯಲಿದ್ದೀರಿ. ಗ್ರೂಪ್ ಕೆಎನ್‌ಆರ್ ಇದರ ಹಿಂದಿದೆ. ಮೇ 1ರ ಡೆಲ್ಲಿ ಸ್ಕೂಲ್ ಅಟ್ಯಾಕ್ ಕೃತ್ಯದಲ್ಲೂ ಇದೇ ಗ್ರೂಪ್ ಇತ್ತು ಎಂಬುದಾಗಿ ಬರೆದಿದ್ದಾನೆ. ಪೊಲೀಸರು ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.


ಇದೇ ಮಾದರಿಯ ಇಮೇಲ್ ಸಂದೇಶವನ್ನು ಒಂದೇ ದಿನ ದೇಶದ ಇತರ 41 ವಿಮಾನ ನಿಲ್ದಾಣಗಳಿಗೆ ರವಾನಿಸಲಾಗಿದ್ದು, ಎಲ್ಲ ಕಡೆಯೂ ಒಂದೇ ಇಮೇಲ್ ಐಡಿಯಿಂದ ಸಂದೇಶ ಕಳಿಸಲಾಗಿದೆ. ಸಿಐಎಸ್‌ಎಫ್ ತಪಾಸಣೆ ನಡೆಸಿ ಹುಸಿ ಬಾಂಬ್ ಕರೆ ಎಂದು ತಿಳಿಸಿದ್ದಾರೆ. ಮೇ ಮೊದಲ ವಾರದಲ್ಲಿ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ದುಬೈಯಿಂದ ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲೂ ದೇಶದ 22 ವಿಮಾನ ನಿಲ್ದಾಣಗಳಿಗೆ ಒಂದೇ ಇಮೇಲ್ ಐಡಿಯಿಂದ ಸಂದೇಶ ಹೋಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net