ಮಂಗಳೂರು ಏರ್‌ಪೋರ್ಟ್ ಅಭಿವೃದ್ಧಿಪಡಿಸಿ, ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

airport
Published on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಅಭಿವೃದ್ಧಿ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸಬೇಕು ಎಂಬ ಹಕ್ಕೊತ್ತಾಯದ 12 ಗಂಟೆಗಳ ಟ್ವಿಟರ್ ಅಭಿಯಾನ ಫ್ಲೈಫ್ರಂಐಎಕ್ಸ್‌ಇ(#FlyFromIXE)ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

1000ಕ್ಕೂ ಮಂದಿ ಈ ಹ್ಯಾಷ್‌ಟ್ಯಾಗ್ ಸಹಿತ ಟ್ವೀಟ್ ಮಾಡಿ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಮೂಲಸೌಲಭ್ಯಗಳನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಬೇಕು ಎಂಬುದಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಇದು ಸಾಕಷ್ಟು ಟ್ರೆಂಡ್ ಆಗಿತ್ತು. ಆದರೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಬಿಟ್ಟರೆ ಜನಪ್ರತಿನಿಧಿಗಳು ಇದರಲ್ಲಿ ಸಹಭಾಗಿತ್ವ ಕೊಟ್ಟಿಲ್ಲ ಎನ್ನುವುದು ನಿರಾಶಾದಾಯಕ ಎಂದು ಸಂಘಟಕರಲ್ಲೊಬ್ಬರು ತಿಳಿಸಿದರು.

ಮುಂದೆಯೂ ಈ ಹ್ಯಾಶ್‌ಟ್ಯಾಗ್ ಉಳಿಸಿಕೊಂಡು ವಾಟ್ಸಾೃಪ್ ಗ್ರೂಪ್ ರಚಿಸಿ ಈ ಒತ್ತಾಯವನ್ನು ಜೀವಂತವಾಗಿ ಇರಿಸಿಕೊಳ್ಳುತ್ತ ಸರ್ಕಾರವನ್ನು ಒತ್ತಾಯಿಸುವುದಕ್ಕೆ ತೀರ್ಮಾನಿಸಲಾಗಿದೆ. ಅಭಿಯಾನದಲ್ಲಿ ಅನೇಕರು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣವನ್ನು ವಹಿಸಿಕೊಂಡಿರುವ ಅದಾನಿ ಗ್ರೂಪ್‌ನ್ನೂ ಟ್ಯಾಗ್ ಮಾಡಲಾಗಿದೆ.

ವಿಮಾನಗಳ ಇಂಧನ ಮೇಲಿನ ಶೇ.28ರಷ್ಟು ಮೌಲ್ಯವರ್ಧಿತ ತೆರಿಗೆ ಹೇರಿರುವುದು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೇಗೆ ತೊಂದರೆ ಉಂಟು ಮಾಡಿದೆ ಎಂಬ ಬಗ್ಗೆ ಅನೇಕರು ಗಮನಸೆಳೆದಿದ್ದಾರೆ. ಮಂಗಳೂರಿಗೆ ಇನ್ನಷ್ಟು ವಿಮಾನಗಳು ಬರಬೇಕು, ದೇಶೀಯ ವಿಮಾನಗಳ ಹಾರಾಟವೂ ಹೆಚ್ಚಬೇಕು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ ಎಂದು ಸಂಘಟಕರಲ್ಲೊಬ್ಬರಾದ ಶ್ರೀಕರ ತಿಳಿಸಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಟ್ವೀಟ್ ಅಭಿಯಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net