ಮಂಗಳೂರು ಏರ್‌ಪೋರ್ಟ್‌ಗೆ ಜಾಗತಿಕ ಪ್ರಶಸ್ತಿ

mangalore airport new
Published on

ಮಂಗಳೂರು: ಕಣ್ಣೂರು ವಿಮಾನ ನಿಲ್ದಾಣದೊಂದಿಗೆ ಕಠಿಣ ಪೈಪೋಟಿಯ ಹೊರತಾಗಿಯೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್ ಸರ್ವೀಸ್ ಕ್ವಾಲಿಟಿಗಾಗಿ ೨೦೧೯ನೇ ಸಾಲಿನ ವಿಶ್ವ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.

ಗ್ರಾಹಕರಿಗೆ ನೀಡುವ ಉತ್ತಮ ಮಟ್ಟದ ಸೇವೆ, ವಿಶ್ವ ದರ್ಜೆಯ ಸೌಲಭ್ಯಗಳಿಗಾಗಿ ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಮಂಗಳೂರು, ತಿರುವನಂತಪುರಂ, ಚಂಡೀಗಢ, ಲಕ್ನೋ ವಿಮಾನ ನಿಲ್ದಾಣಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಎಎಸ್‌ಕ್ಯೂ ಸರ್ವೇಯನ್ನು ಜಾಗತಿಕ ಸಂಸ್ಥೆಯಾಗಿರುವ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ ಕೈಗೊಳ್ಳುತ್ತದೆ. ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತೃಪ್ತಿ ಆಧರಿಸಿ ಎಎಸ್‌ಕ್ಯೂ ಅಂಕ ನೀಡಲಾಗುತ್ತದೆ. ಸಂಪರ್ಕ, ಚೆಕ್ ಇನ್, ಭದ್ರತೆ, ಸೌಲಭ್ಯ, ಆಹಾರ-ಪಾನೀಯ, ಪರಿಸರ ಮತ್ತು ಆಗಮನ ಸೇವೆಗಳೂ ಸೇರಿದಂತೆ ೩೪ ಪ್ರಮುಖ ಅಂಶಗಳನ್ನು ಇದು ಒಳಗೊಂಡಿದೆ.

೨೦೧೯ರಲ್ಲಿ ಜಗತ್ತಿನ ೩೫೬ ವಿಮಾನ ನಿಲ್ದಾಣಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

 ಮಂಗಳೂರಿನ ಹಿರಿಮೆಯೇನು?: ಎರಡು ಪ್ರಯಾಣಿಕರ ಸೇತುವೆ ನಿರ್ಮಾಣ, ಟರ್ಮಿನಲ್ ಕಟ್ಟಡದ ಸುಧಾರಣೆ ಮೂಲಕ ಪರಿಸರ ಸುಂದರೀಕರಣಗೊಳಿಸಲಾಗಿದೆ. ಬೃಹತ್ ವಿಮಾನ ಮಾಹಿತಿ ಪ್ರದರ್ಶನ ಫಲಕಗಳನ್ನು ಅಳವಡಿಸಿರುವುದು, ಆ್ಯಪ್ ಆಧರಿತ ಕ್ಯಾಬ್ ಆಗ್ರಿಗೇಟರ್ ವ್ಯವಸ್ಥೆ, ಅಟೊಮ್ಯಾಟಿಕ್ ಇಲೆಕ್ಟ್ರಾನಿಕ್ ಆಕ್ಸೆಸ್ ಕಂಟ್ರೋಲ್, ಆಗಮನ-ನಿರ್ಗಮನಕ್ಕೆ ಇ-ಗೇಟ್ ವ್ಯವಸ್ಥೆ, ಟರ್ಮಿನಲ್ ಹಾಗೂ ನಗರದ ಕಡೆಗೆ ಉತ್ತಮ ಸೈನೇಜ್ ಫಲಕಗಳು, ಎಟಿಎಂ, ೫೦೦ರಷ್ಟು ಟ್ರಾಲಿಗಳು, ಪರಿಸರ ಸ್ನೇಹಿ ವ್ಯವಸ್ಥೆಗಳು. ಅಂಗವಿಕಲರಿಗಾಗಿ ಪೂರಕ ವ್ಯವಸ್ಥೆ, ಸಹಾಯ ಕೇಂದ್ರ, ಅನೇಕ ನಗದು ರಹಿತ ಪಾವತಿ ವ್ಯವಸ್ಥೆ, ಟರ್ಮಿನಲ್ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಕಲೆ, ಜಾನಪದವನ್ನು ಪ್ರತಿಬಿಂಬಿಸುವ ಕಲೆ ಪ್ರದರ್ಶನವನ್ನು ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net